ಕುಕ್ಕೆ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮೂರು ಕಿಲೋಮೀಟರ್ ಸಂಚರಿಸಿದಾಗ ಆರಂಪಾಡಿ ಎಂಬ ಊರು ಸಿಗುತ್ತದೆ. ಆರಂಪಾಡಿಯಿಂದ ಎಡ್ಡೊಳಿ ಕಡೆಗೆ ತೆರಳುವ ಎರಡು ಕಿಲೋಮೀಟರ್ ರಸ್ತೆ ಗ್ರಾಮಪಂಚಾಯತ್ ಹಾದಿಯಾಗಿದ್ದು. ಈ ಮಾರ್ಗವು ಮುಂದಕ್ಕೆ ಸುಬ್ರಹ್ಮಣ್ಯ - ಸುಳ್ಯ ರಾಜ್ಯ ಹೆದ್ದಾರಿಗೆ ಸಂಪರ್ಕ ಹೊಂದುವುದರಿಂದ ಸಂಚಾರಕ್ಕೆ ಮಹತ್ವದ್ದಾಗಿದೆ.
ಇದೀಗ ಕುಕ್ಕೆ ಸುಬ್ರಹ್ಮಣ್ಯ–ಸುಳ್ಯ ಹೆದ್ದಾರಿ ನೇರವಾಗಿ ಪಟ್ಟಣ ಮಧ್ಯಭಾಗದ ಮೂಲಕ ಸಾಗುತ್ತಿರುವುದರಿಂದ ಜಾತ್ರೆ ಸಂದರ್ಭಗಳಲ್ಲಿ ವಾಹನ ಸಿಲುಕಿಕೊಂಡು ಸಮಸ್ಯೆ ಉಂಟಾಗಿ ಭಕ್ತರು ಹಾಗೂ ಸಾರ್ವಜನಿಕರು ದೀರ್ಘ ಕಾಲ ಕಾದು ಸಂಚರಿಸುವ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಆರಂಪಾಡಿ–ಎಡ್ಡೊಳಿ ರಸ್ತೆ ಕುಕ್ಕೆ ಸುಬ್ರಹ್ಮಣ್ಯ ಬೈಪಾಸ್ ಮಾರ್ಗವಾಗಿ ರೂಪಾಂತರಗೊಳ್ಳಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ನೇತೃತ್ವದಲ್ಲಿ, ಸಮಿತಿ ಹಾಗೂ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಒಗ್ಗಟ್ಟಿಗೆ ಬಂದು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮುಂಚೂಣಿಯ ನಿರ್ಧಾರ ಕೈಗೊಂಡಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಮಾರು ಎರಡು ಕೋಟಿ ರೂಪಾಯಿಗಳ ಯೋಜನೆ ರೂಪಗೊಂಡಿದ್ದು, ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಾಣದ ಮೂಲಕ ಈ ಹಾದಿ ಬೈಪಾಸ್ ಮಾರ್ಗವಾಗಿ ರೂಪುಗೊಳ್ಳಲಿದೆ.
ಪ್ರಾಥಮಿಕ ಹಂತವಾಗಿ, ಸೆಪ್ಟೆಂಬರ್ 7ರಂದು ಶ್ರಮದಾನ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಆರಂಪಾಡಿ–ಎಡ್ಡೊಳಿ ರಸ್ತೆಯಲ್ಲಿರುವ ಕಳೆ ಕೀಳುವಿಕೆ, ಚರಂಡಿ ಸ್ವಚ್ಛತೆ, ಮಳೆಯಿಂದಾಗಿ ಹಾನಿಗೊಂಡ ಮಣ್ಣಿನ ರಸ್ತೆಯಲ್ಲಿರುವ ಕೊಂಡಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಲಾಗುತ್ತದೆ.
ಈ ಶ್ರಮದಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮಪಂಚಾಯತ್, ಸುಬ್ರಹ್ಮಣ್ಯ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸೇರಿ ಸುಮಾರು 150 ಮಂದಿ ಪಾಲ್ಗೊಳ್ಳಲಿದ್ದಾರೆ.
ಈ ಬದಲಾವಣೆಯಿಂದ ಕುಕ್ಕೆಗೆ ಆಗಮಿಸುವ ಭಕ್ತರಿಗೆ, ಸ್ಥಳೀಯ ಸಾರ್ವಜನಿಕರಿಗೆ ಹಾಗೂ ಸುಳ್ಯ–ಮಡಿಕೇರಿ ಬಾಗಕ್ಕೆ ಸಂಚರಿಸುವ ವಾಹನ ಸವಾರರಿಗೆ ಸುಗಮ ಸಂಚಾರ ಸಾಧ್ಯವಾಗಲಿದ್ದು, ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ.
Post a Comment