ಅಡ್ಯಾರ್ ತಜಿಪೋಡಿ ದನ ಕಳ್ಳತನ ಪ್ರಕರಣ – ಮೂವರು ಆರೋಪಿಗಳ ಬಂಧನ.

ಮಂಗಳೂರು, ಸೆಪ್ಟೆಂಬರ್ 13:
ಮಂಗಳೂರು ನಗರದ ಅಡ್ಯಾರ್ ತಜಿಪೋಡಿ ಪ್ರದೇಶದಲ್ಲಿ ನಡೆದ ಗೋ ಕಳ್ಳತನ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಿಂದ ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್ 13ರ ಬೆಳಗಿನ ಜಾವ, ಅಡ್ಯಾರ್‌ನ ಉಮೇಶ್ ಆಳ್ವ ಎಂಬವರ ಮನೆಯ ಅಂಗಳದಿಂದ ಒಂದು ಕ್ರಾಸ್ ಜರ್ಸಿ ಹಸುವನ್ನು ಕಳ್ಳತನ ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 144/2025, ಕಲಂ 303 (2) ಐಪಿಸಿ ರಂತೆ ಪ್ರಕರಣ ದಾಖಲಾಗಿತ್ತು.

ಬಂಧಿತರಾದ ಆರೋಪಿಗಳು:
1. ಶಾಬಾಜ್ ಅಹಮ್ಮದ್ (ತಂದೆ: ಮೊಹಮ್ಮದ್ ನೌಷಾದ್), ಗಾಣದಬೆಟ್ಟು ಮನೆ, ಅಡ್ಯಾರ್ ಕಣ್ಣುರು, ಮಂಗಳೂರು.

2. ಮೊಹಮ್ಮದ್ ಸುಹಾನ್ (ತಂದೆ: ಸುಲೈಮಾನ್), ಯಶಸ್ವಿ ಹಾಲ್ ಬಳಿ ಮನೆ, ಅರ್ಕುಳ, ವಳಚ್ಚಿಲ್, ಮಂಗಳೂರು.

3. ವಳಚ್ಚಿಲ್ ಖಾದರ್ ಮೊಹಮ್ಮದ್ @ ಕೋಳಿ ಮೋನಕ್ಕ (ತಂದೆ: ಅಬ್ದುಲ್ ಖಾದರ್), ಜುಮ್ಮಾ ಮಸೀದಿ ಬಳಿ ಮನೆ, ಅಡ್ಯಾರ್ ಮಂಗಳೂರು.

ಪೊಲೀಸರ ಪ್ರಕಾರ, ಶಾಬಾಜ್ ಹಾಗೂ ಸುಹಾನ್ ದನವನ್ನು ಕಳ್ಳತನ ಮಾಡಿ ಖಾದರ್‌ಗೆ ಮಾರಾಟ ಮಾಡಿದ್ದರು. ಖಾದರ್ ಆರೋಪಿಯಿಂದ ದನವನ್ನು ಮಾಂಸ ಮಾಡಲು ಖರೀದಿಸಿದ್ದರೂ, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ದನವನ್ನು ಜೀವಂತವಾಗಿ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.

ಹಳೆಯ ಅಪರಾಧ ದಾಖಲೆಗಳು
ಶಾಬಾಜ್ ಅಹಮ್ಮದ್: ಮಂಗಳೂರು ಗ್ರಾಮಾಂತರ ಹಾಗೂ ಕಂಕನಾಡಿ ಠಾಣೆಗಳಲ್ಲಿ ಒಂದು ಕೊಲೆ, ಎರಡು ಕೊಲೆ ಪ್ರಯತ್ನ ಹಾಗೂ ಒಂದು ದೊಂಬಿ ಪ್ರಕರಣ ದಾಖಲಾಗಿತ್ತು.

ಮೊಹಮ್ಮದ್ ಸುಹಾನ್: ಉಳ್ಳಾಲ ಠಾಣೆಯಲ್ಲಿ ಒಂದು ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣ.

ವಳಚ್ಚಿಲ್ ಖಾದರ್ ಮೊಹಮ್ಮದ್: ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2024ರಲ್ಲಿ ಒಂದು ಗೋಹತ್ಯೆ ಪ್ರಕರಣ ದಾಖಲಾಗಿತ್ತು.

ಮುಂದಿನ ಕಾನೂನು ಕ್ರಮ
ಆರೋಪಿಗಳು ದನವನ್ನು ಕೊಂದು ಮಾಂಸ ಮಾಡಲು ಸಿದ್ಧತೆ ಮಾಡಿಕೊಂಡ ಹಿನ್ನೆಲೆಯಲ್ಲಿ, ಘಟನೆ ನಡೆದ ಶೆಡ್ ಅನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ – 2020 ರ ಅಡಿಯಲ್ಲಿ ಜಪ್ತಿ ಮಾಡಿ, ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

Post a Comment

Previous Post Next Post