ನೆಲ್ಯಾಡಿ : ಸೆಪ್ಟೆಂಬರ್ 13ರಂದು ಕಾಮಧೇನು ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ, ಕಾಮಧೇನು ಮಹಿಳಾ ಸಹಕಾರಿ ಸಂಘದ ನೇತೃತ್ವದಲ್ಲಿ ರಕ್ತದಾನ ಶಿಬಿರ ಜರುಗಿತು.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಶಿಶಿರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, “ರಕ್ತದಾನ ಶ್ರೇಷ್ಟ ದಾನ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆ ರಕ್ತದಾನ ಮಾಡುವುದು ಅಗತ್ಯ. ಇದು ಕೇವಲ ಮಾನವೀಯ ಕರ್ತವ್ಯವಲ್ಲ, ಆರೋಗ್ಯಕ್ಕೂ ಅನುಕೂಲಕರ. ಒಂದು ಜೀವ ಉಳಿಸುವ ಪುಣ್ಯದ ಸಾರ್ಥಕತೆ ರಕ್ತದಾನದ ಮೂಲಕ ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಮಾತನಾಡಿ, “ಸಂಘ ಕೇವಲ ವ್ಯವಹಾರಿಕ ಬೆಳವಣಿಗೆಯ ಕಡೆ ಗಮನ ನೀಡದೆ, ಸಾಮಾಜಿಕ ಬದ್ಧತೆಯೊಂದಿಗೆ ಮಾನವೀಯ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ರಕ್ತದಾನ ಶಿಬಿರ ಆಯೋಜನೆಯೂ ಅದಕ್ಕೆ ಸಾಕ್ಷಿ” ಎಂದು ಅಭಿಪ್ರಾಯಪಟ್ಟರು.
ಬೆಳ್ತಂಗಡಿ ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರ ಪಡುಬೆಟ್ಟು ‘ಕಾಮಧೇನು ಆರೋಗ್ಯ ಭಾಗ್ಯ ಯೋಜನೆ’ಯ ಪೋಸ್ಟರ್ ಬಿಡುಗಡೆಗೊಳಿಸಿದರು. ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ಲೇಡಿ ಘೋಷನ್ ಆಸ್ಪತ್ರೆಯ ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕ ಪ್ರವೀಣ್ ಕುಮಾರ್, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಸತೀಶ್ ಹಾಗೂ ಸಂಘದ ಸಲಹೆಗಾರ ಜನಾರ್ಧನ ಬಾಣಜಾಲ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ರಕ್ತದಾನಿಗಳು ಉತ್ಸಾಹದಿಂದ ಭಾಗವಹಿಸಿದರು.
ಶ್ರೀಮತಿ ಉಷಾ ಅಂಚನ್ ಸ್ವಾಗತಿಸಿದರು, ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಚೈತನ್ಯ ವಂದಿಸಿದರು ಹಾಗೂ ಸುಧೀರ್ ಕುಮಾರ್ ನಿರೂಪಿಸಿದರು.
Post a Comment