ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ನೂತನ ಲಿಫ್ಟ್ ಉದ್ಘಾಟನೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆಪ್ಟೆಂಬರ್ 12ರಂದು ಸಂಘದ ಕಾಮಧೇನು ಸಭಾಂಗಣದಲ್ಲಿ ಜರಗಿತು.
ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಲಿಫ್ಟ್ ಲೋಕಾರ್ಪಣೆ ನೆರವೇರಿಸಿದರು. ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮುರಳಿಧರ್ ಅವರು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಶಿಕುಮಾರ್ ರೈ ಅವರು –
“ದ.ಕ. ಜಿಲ್ಲೆಯಲ್ಲಿ ಸತತ ಶೇ.100 ಸಾಲ ವಸೂಲಾತಿ ಸಾಧಿಸಿ ಪ್ರಶಸ್ತಿ ಗಳಿಸಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶ್ಲಾಘನೀಯ. ಯುವ ಅಧ್ಯಕ್ಷರು ಹಾಗೂ ದಕ್ಷ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಂಘ ಉತ್ತಮ ಸಾಧನೆ ಮಾಡುತ್ತಿದೆ. 10 ಲಕ್ಷ ರೂ. ವೆಚ್ಚದಲ್ಲಿ ಲಿಫ್ಟ್ ಅಳವಡಿಸಿ, ಸದಸ್ಯರಿಗಾಗಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಮಾದರಿಯಾಗಿದೆ” ಎಂದು ಪ್ರಶಂಸಿಸಿದರು.
ವಾರ್ಷಿಕ ಮಹಾಸಭೆ
ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಂಘವು ಪ್ರಸ್ತುತ 6648 ಸದಸ್ಯರನ್ನು ಹೊಂದಿದ್ದು, 552 ಕೋಟಿ 90 ಲಕ್ಷ ರೂ.ಗಳ ವ್ಯವಹಾರ ನಡೆಸಿದೆ. 1 ಕೋಟಿ 90 ಲಕ್ಷ ಲಾಭ ಗಳಿಸಿದೆ. ಶೇ.100 ಸಾಲ ವಸೂಲಾತಿ ಸಾಧನೆಯಿಂದ ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರಶಸ್ತಿ ಲಭಿಸಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಟ್ ನೀಡಲಾಗುವುದು” ಎಂದು ಘೋಷಿಸಿದರು.
ಕಾರ್ಯನಿರ್ವಹಣಾಧಿಕಾರಿ ದಯಕರ ರೈ ಮುಂಡಾಲಗುತ್ತು ಆಡಳಿತ ವರದಿ, ಆರ್ಥಿಕ ಲೆಕ್ಕಪತ್ರಗಳ ಅಂಗೀಕಾರ ಹಾಗೂ ಅಂದಾಜು ಆಯ-ವ್ಯಯ ಮಂಡಿಸಿ ಅನುಮೋದನೆ ಪಡೆದರು.
ಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಜರಗಿತು.
ಸನ್ಮಾನ ಕಾರ್ಯಕ್ರಮ
ಈ ಸಂದರ್ಭದಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು, ಡಾ. ಮುರಳಿ ಹಾಗೂ ಲಿಫ್ಟ್ ತಯಾರಕ ನವೀನ್ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದವರು:
ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನಿರ್ದೇಶಕರು ಜಯಾನಂದ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಜಿನ್ನಪ್ಪ ಗೌಡ, ಜನಾರ್ದನ ಗೌಡ ಬರೆಮೇಲು, ಸುಧಾಕರ್ ಬಿ, ಶ್ರೀಮತಿ ಉಷಾ ಅಂಚನ್, ಶ್ರೀಮತಿ ಶೇಷಮ್ಮ, ಹರೀಶ್ ಎ, ಬಾಬು ನಾಯ್ಕ, ಭಾಸ್ಕರ ರೈ, ವಸಂತ ಎಸ್.
ಕಾರ್ಯಕ್ರಮವನ್ನು ಧನುಷ್ ಪ್ರಾರ್ಥನೆಯಿಂದ ಪ್ರಾರಂಭಿಸಿ, ರವಿಚಂದ್ರ ಧನ್ಯವಾದ ಅರ್ಪಿಸಿ, ಜಯಾನಂದ ಬಂಟ್ರಿಯಾಲ್ ನಿರೂಪಿಸಿದರು.
Post a Comment