ಅಂತರ್‌ರಾಜ್ಯ ಕುಖ್ಯಾತ ವಾಹನ ಕಳ್ಳ ಬಂಧನ – ಪಿಕಪ್ ಹಾಗೂ ಬೈಕ್‌ ವಶಕ್ಕೆ.

ಮಂಗಳೂರು: ಸುರತ್ಕಲ್‌ ಪೊಲೀಸರು ಅಂತರ್‌ರಾಜ್ಯ ಮಟ್ಟದಲ್ಲಿ ವಾಹನ ಕಳ್ಳತನಗಳಲ್ಲಿ ತೊಡಗಿಸಿಕೊಂಡಿದ್ದ ಕೇರಳ ಮೂಲದ ಕುಖ್ಯಾತ ಕಳ್ಳನನ್ನು ಬಂಧಿಸಿ, ಕಳವು ಮಾಡಿದ ಪಿಕಪ್‌ ವಾಹನ ಮತ್ತು ಬೈಕ್‌ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಪ್ರಕಾರ, ದಿನಾಂಕ 30-09-2025ರಂದು ರಾತ್ರಿ ಸುಮಾರು 9 ಗಂಟೆಗೆ ಸುರತ್ಕಲ್‌ ಠಾಣಾ ವ್ಯಾಪ್ತಿಯ ಕುಳಾಯಿಯ ಸುಕುಮಾರ್‌ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ KA-19-AE-8017 ನಂಬರಿನ ಪಿಕಪ್‌ ವಾಹನವನ್ನು ಅಪರಿಚಿತರು ಕಳವು ಮಾಡಿದ್ದರು. ಈ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ನಂ:126/2025 ಕಲಂ 303(2) ಬಿ ಎನ್‌ ಎಸ್‌ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯ ವೇಳೆ, ದಿನಾಂಕ 07-10-2025ರಂದು ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಯುವಕನನ್ನು ಸುರತ್ಕಲ್‌ ಪೊಲೀಸರು ತಡೆದು ವಿಚಾರಣೆ ನಡೆಸಿದರು. ಆತನೇ ಕೇರಳದ ತಿರುವನಂತಪುರಂ ಜಿಲ್ಲೆಯ ನಿವಾಸಿ ಹಂಝ ಕುಪ್ಪಿಕಂಡ @ ಹಂಸ @ ಹಂಝ ಪೊನ್ನನ್ (29) ಎಂದು ಗುರುತಿಸಲ್ಪಟ್ಟನು.

ಪೊಲೀಸರು ವಿಚಾರಣೆ ನಡೆಸಿದಾಗ, ಆತನು ಚಲಾಯಿಸುತ್ತಿದ್ದ ಬೈಕ್‌ಗೆ ಯಾವುದೇ ದಾಖಲೆ ಇಲ್ಲದೇ ಇದ್ದು, ಆ ಬೈಕ್‌ ಅನ್ನು ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯ ಫಾರಂ ಮಾಲ್‌ ಬಳಿಯಿಂದ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಮೊ ನಂ:209/2025 ಕಲಂ 303(2) ಬಿ ಎನ್‌ ಎಸ್‌ 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ಆರೋಪಿಯು ಸುರತ್ಕಲ್‌ ಠಾಣಾ ವ್ಯಾಪ್ತಿಯ ಪಿಕಪ್‌ ವಾಹನ ಕಳ್ಳತನಕ್ಕೂ ಸಂಬಂಧ ಹೊಂದಿರುವುದು ತನಿಖೆಯಿಂದ ಬಹಿರಂಗವಾಗಿದೆ. ಪೊಲೀಸರು ಪಿಕಪ್‌ ವಾಹನ ಮತ್ತು ಬೈಕ್‌ ಎರಡನ್ನೂ ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ರೂ.3,10,000/- ಆಗಿದೆ.

ಪೊಲೀಸರ ತನಿಖೆಯಿಂದ ತಿಳಿದುಬಂದಂತೆ, ಹಂಝ ಕುಪ್ಪಿಕಂಡ ಎಂಬಾತನ ವಿರುದ್ಧ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಬೈಲ್‌ ಕಳ್ಳತನ ಮತ್ತು ವಾಹನ ಕಳ್ಳತನ ಸೇರಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಸುರತ್ಕಲ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಪ್ರಮೋದ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಶಿಧರ ಶೆಟ್ಟಿ, ಎಎಸ್‌ಐ ರಾಜೇಶ್‌ ಆಳ್ವ ಹಾಗೂ ಸಿಬ್ಬಂದಿಗಳಾದ ಉಮೇಶ್‌, ವಿನೋದ್‌ ಕುಮಾರ್‌, ನಾಗರಾಜ್‌ ಮತ್ತು ಸುನೀಲ್‌ ಕುಮಾರ್‌ ಅವರು ಯಶಸ್ವಿಯಾಗಿ ನಡೆಸಿದ್ದಾರೆ.

Post a Comment

Previous Post Next Post