ಬೆಳ್ಳಾರೆ: ಇಲಿಗೆ ಉಪಯೋಗಿಸುವ ಇಲಿ ಪಾಷಾಣವನ್ನು ಮದ್ಯಕ್ಕೆ ಬೆರೆಸಿ ಕುಡಿದು ಅಸ್ವಸ್ಥಗೊಂಡ ಯುವಕನೋರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಬೆನ್ನಾವರ ಪಟ್ಟೆಯಿಂದ ವರದಿಯಾಗಿದೆ.
ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ನಿವಾಸಿ ಹರ್ಷಿತ್ ರೈ(29ವ) ಮೃತ ಯುವಕ.
ಸುಮಾರು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಯುವಕನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ನ.21ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಲಿಗೆ ಉಪಯೋಗಿಸುವ ಇಲಿ ಪಾಷಾಣವನ್ನು ಮದ್ಯಕ್ಕೆ ಬೆರೆಸಿ ಕುಡಿದು ಅಸ್ವಸ್ಥಗೊಂಡಿದ್ದ.
ಆತನನ್ನು ಆ ದಿನ ರಾತ್ರಿಯೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಅದರಂತೆ ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ನ.30ರಂದು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿರುತ್ತಾರೆ.ಈ ಬಗ್ಗೆ ಮೃತ ಯುವಕನ ತಂದೆ ಮಹಾಬಲ ರೈ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 32/2024 ಕಲಂ 194 ಬಿ. ಎನ್. ಎಸ್. ಎಸ್ ಯಂತೆ ಪ್ರಕರಣ ದಾಖಲಾಗಿದೆ.
Post a Comment