ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ಗೋಸಂರಕ್ಷಣೆಯ ಕಾಳಜಿ

*ಗೋವು ನಮಗೇಕೆ ಪೂಜನೀಯ* 

 ಕ್ಷೀರಸಾಗರದಲ್ಲಿ ಉದ್ಭವಿಸಿದ ಉಪಯುಕ್ತ ವಸ್ತುಗಳಲ್ಲಿ ಪ್ರಮುಖವಾದದು ಕಾಮಧೇನು. ಇದು ಗೋಸಂತತಿಯ ಆದಿ ರೂಪ. ಸಮುದ್ರಮಥನ ಕಾಲದಲ್ಲಿ ಮಾನವ ಜಾತಿಗೆ ದೊರೆತ ಅಮೂಲ್ಯ 14 ರತ್ನಗಳಲ್ಲಿ ಒಂದು ಸುರಭಿ. ಗೋವಿನ ದಿವ್ಯತೆ,ಪವಿತ್ರತೆ ಮತ್ತು ಮಹಿಮೆಗಳ ಬಗೆಗೆ ವೇದ ಪುರಾಣ ಮತ್ತು ಇತಿಹಾಸಗಳಲ್ಲಿ ವಿಫುಲ ವರ್ಣನೆ, ದೃಷ್ಟಾಂತ ಕಥೆಗಳಿವೆ. ವೈದಿಕ ಮಹರ್ಷಿಗಳು,ಸಂತ ಮಹಾತ್ಮರು, ಗೋವಿನ ಕುರಿತು ಆಳವಾದ ಪರಿಶೀಲನೆ, ಅಧ್ಯಯನ,ಅಂತರಂಗದ ಧ್ಯಾನದಿಂದ ಗೋವಿನ ವಿರಾಟ್ ದರ್ಶನ ಪಡೆದು ಧನ್ಯರಾಗಿರುತ್ತಾರೆ.ಸಕಲ ಚರಾಚರ ಜೀವಿಗಳ ಅಸ್ತಿತ್ವಕ್ಕೆ ಗೋವುಗಳೇ ಕಾರಣ. ಅನಂತ ವಿಶ್ವ ಜೀವನವು ಗೋವುಗಳನ್ನು ಆಧರಿಸಿದೆ ಎಂದು ಶಾಸ್ತ್ರ ಗ್ರಂಥಗಳು ಹೇಳಿವೆ.ಅದು ಇಂದಿಗೂ ಕೂಡ ಸತ್ಯ.

 ಗೋವಿನಲ್ಲಿ 33 ಕೋಟಿ ದೇವತೆಗಳು ಆವಾಸವಾಗಿದ್ದಾರಂತೆ. ಮನುಷ್ಯನ ಸಕಲ ಇಚ್ಛೆಗಳನ್ನು ಪೂರ್ಣಗೊಳಿಸುವ ಗೋವು ಪೃಥ್ವಿ,ಸರಸ್ವತಿ ಈ ಮೂರು ಸಮಾನಾರ್ಥಕ ಪದಗಳು. ವಿದ್ಯೆ,ಗೋವು,ಭೂಮಿ ಈ ಮೂರನ್ನು ದಾನ ಮಾಡಬೇಕು. ಅವುಗಳ ಫಲವು ಏಕಪ್ರಕಾರವಾಗಿ ಇರುವುದು.

 ಒಬ್ಬ ವ್ಯಕ್ತಿ ಮೃತನಾದಾಗ ಉತ್ತರಕ್ರಿಯೆಯ ಸಂದರ್ಭ ಸಪಿಂಡೀಕರಣದಲ್ಲಿ ಪ್ರತ್ಯಕ್ಷ ಗೋದಾನ ಮಾಡುವ ಮೂಲಕ ವೈತರಣಿ ನದಿ ದಾಟಿ ಸ್ವರ್ಗ ಸೇರಲು ಅವಕಾಶವಿದೆ. ಗಾಯತ್ರಿ ಮಂತ್ರ ಫಲಿಸಲು ಗೋಪೂಜೆ- ಗೋರಕ್ಷಣೆ ಅಗತ್ಯ. ಒಂದು ಕಾಲದಲ್ಲಿ ವಸ್ತು ವಿನಿಮಯಕ್ಕೆ, ಸಂಭಾವನೆಗೆ,ದಾನ ರೂಪದಲ್ಲಿ ವಸ್ತು ವಿನಿಮಯದಲ್ಲಿ ಗೋವು ಪ್ರಧಾನ ಮಾಧ್ಯಮ. ಲೋಕ ರಕ್ಷಣೆ ಮಾಡುವಲ್ಲಿ ಪುಷ್ಟಿಗೊಳಿಸುವಲ್ಲಿ ಮತ್ತು ಪ್ರಾಪ್ತಿಯಲ್ಲಿ ಭೂಮಿಯ ಮೇಲೆ ಗೋವುಗಳು ಸೂರ್ಯ ಕಿರಣಗಳ ಸಮಾನವಾಗಿವೆ.

 ಗೋವಿನ ನಾಲ್ಕು ಕಾಲುಗಳು ನಾಲ್ಕು ಯುಗಗಳನ್ನು ಪ್ರತಿಬಿಂಬಿಸುತ್ತವೆಯಂತೆ. ಈಗಾಗಲೇ ಗೋವಿನ ಕೊನೆಯ ಕಾಲು ಅಂದರೆ ಕಲಿಯುಗ ನಡೆಯುತ್ತಿದೆ. ಕ್ರಮೇಣ ಸವೆಯುತ್ತಿದೆ. ಅತ್ಯಂತ ಕಠಿಣ ಸ್ಥಿತಿಯನ್ನು ಕಾಣುತ್ತಿದ್ದೇವೆ. ನಂತರ ಭೂಮಿ ತನ್ನಷ್ಟಕ್ಕೆ ತಾನೇ ನಾಶವಾಗುತ್ತದೆಯೋ ಎಂಬಲ್ಲಿಗೆ ಸಾಗುತ್ತಿರುವಂತೆ ಕಾಣುತ್ತಿದೆ. ಶ್ರೀರಾಮಚಂದ್ರನು ತನ್ನ ಪಟ್ಟಾಭಿಷೇಕದ ಸಮಯದಲ್ಲಿ ಒಂದು ಲಕ್ಷ ಹಾಲು ಕೊಡುವ ಗೋವುಗಳನ್ನು ದಾನ ಮಾಡಿರುವನಂತೆ.ಹಿಂದಿನ ಕಾಲದಲ್ಲಿ ಒಂದು ಕೋಟಿ ಗೋವುಗಳಿದ್ದವರನ್ನು ನಂದರಾಜ,50 ಲಕ್ಷ ಗೋವುಗಳನ್ನು ಹೊಂದಿದ್ದರೆ ವೃಷಭಾನುಜ, 10 ಲಕ್ಷ ಗೋವುಗಳನ್ನು ಹೊಂದಿದ್ದರೆ ವೃಷಭಾನು, 9ಲಕ್ಷ ಇದ್ದರೆ ನಂದ, 5 ಲಕ್ಷ ಗೋವುಗಳಿದ್ದರೆ ಉಪನಂದ, ಮುಂತಾದ ಗೌರವದ ಸ್ಥಾನ ನೀಡಿ ಕರೆಯುತ್ತಿದ್ದರು.ಇಂದಿಗೂ ಶ್ರೀಮಂತಿಕೆಗೆ ನಂದನ ಹೆಸರನ್ನು ಉಲ್ಲೇಖಿಸುತ್ತೇವೆ. ಚರಿತ್ರೆಯಲ್ಲಿ ಒಂದು ಗೋವು ಒಂದು ಋಷಿಗೆ ಸಮಾನ ಎಂದು ತಿಳಿಸಿದೆ. ಗೋವಿನ ಮಹಿಮೆಯನ್ನು ವಿವರಿಸುತ್ತಾ ವಸಿಷ್ಠರು ನೀಡಿದ ಉಪದೇಶವೂ ಗೋಪನಿಷತ್ ಎಂದು ಖ್ಯಾತವಾಗಿದೆ.

 ಶ್ರೀ ರಾಮನ ರಾಜ್ಯಾಡಳಿತದಲ್ಲಿ ಇರುವ ಅಸಂಖ್ಯಾತ ಗೋಶಾಲೆಗಳಲ್ಲಿ ಲೆಕ್ಕವಿಲ್ಲದಷ್ಟು ಗೋವುಗಳಿದ್ದವು.ಅವುಗಳನ್ನು ಚೆನ್ನಾಗಿ ಪೊಷಿಸಲಾಗುತ್ತಿತ್ತು. ಗೋವುಗಳು ಪೂಜ್ಯನೀಯವಾಗಿದ್ದವು. ಗೋ ಸೇವೆ ರಾಜ ಧರ್ಮವಾಗಿತ್ತು. ಮನಸೋ ಇಚ್ಛೆ ಹಾಲು ನೀಡುತ್ತಿದ್ದವು.ಹಳ್ಳಿ ಹಳ್ಳಿಗಳಲ್ಲಿ ಹಾಲು, ತುಪ್ಪ,ಬೆಣ್ಣೆ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿತ್ತು. ಮಕ್ಕಳು ದಷ್ಟಪುಷ್ಟರಾಗಿ ಬೆಳೆಯುತ್ತಿದ್ದರು. ಶ್ರೀರಾಮನ ದಿನಚರಿ ಗೋಪ್ರಣಾಮದಿಂದ ಪ್ರಾರಂಭವಾಗುತ್ತಿತ್ತು. ಶ್ರೀರಾಮನು ಪ್ರಾಥ:ಕಾಲದಲ್ಲಿ ಎದ್ದು ತಾಯಿ - ತಂದೆಯರ, ದೇವ ಬ್ರಾಹ್ಮಣರ ಸ್ಮರಣೆ, ಗೋಕರ್ಮಗಳನ್ನು ಮಾಡಿಯೇ ಅನ್ಯ ಕಾರ್ಯದಲ್ಲಿ ತೊಡಗುತ್ತಿದ್ದನು. ಜಗನ್ಮಾತೆ ಸೀತಾದೇವಿ ಸ್ವತಃ ಪೂಜಾ ಸಾಮಗ್ರಿಗಳೊಂದಿಗೆ ಗೋಶಾಲೆಗೆ ತೆರಳಿ, ಗೋಮಾತೆಯನ್ನು ಪೂಜಿಸಿ ಪರಿಪರಿಯ ಪಕ್ವಾನ್ನಗಳನ್ನು ಅದಕ್ಕೆ ಉಣಿಸುತ್ತಿದ್ದಳು. ಇದರಿಂದ ಪ್ರಸನ್ನವಾದ ಗೋವುಗಳು ವಿವಿಧ ಪ್ರಕಾರದ ಭೋಜ್ಯ ವಸ್ತುಗಳನ್ನು ಕೊಡುತ್ತಿದ್ದವು. ಅವುಗಳನ್ನು ಅನ್ನಪೂರ್ಣ ಆವಾಸ ಸ್ಥಾನವಾದ ಪಾಕಶಾಲೆಯಲ್ಲಿಟ್ಟು ಬಂಧು ಬಾಂಧವರು, ಇಷ್ಟ ಮಿತ್ರರೊಂದಿಗೆ ಹಂಚಿಕೊಂಡು ಗೋಗ್ರಾಸದ ಮಹತ್ವ ತಿಳಿಸುತ್ತಿದ್ದಳು.

 *ಶ್ರೀ ಕೃಷ್ಣ ಮತ್ತು ಗೋವು* 

 ಶ್ರೀ ಕೃಷ್ಣನ ಜನನ ಪೂರ್ವದಲ್ಲಿ ಗೋವಂಶವು ಅತ್ಯಂತ ವೇಗವಾಗಿ ನಾಶವಾಗಿತ್ತು. ಬಂಗಾರ ಬೆಳೆಯುವ ಭೂಮಿ ಕ್ಷಾಮ ಮಯವಾಯಿತು. ಹಾಹಾಕಾರ ಕೇಳಿಸಿತು. ಅನಂತ ಕೋಟಿ ಗೋಮಾತೆಯ ರಕ್ಷಣೆಗಾಗಿ ಭಗವಂತ ಶ್ರೀ ಕೃಷ್ಣನ ರೂಪದಲ್ಲಿ ಅವತಾರವೆತ್ತಿದ.ಗೋವಂಶದ ರಕ್ಷಣೆ,ಉದ್ಧಾರ ಮಾಡಿದನು. ಇದರಿಂದ ಬಂಜರಾಗಿದ್ದ ಭರತ ಭೂಮಿ ಗೋಮೂತ್ರ, ಗೋಮಯ, ಗೊಬ್ಬರದಿಂದ ಕೃಷಿಗೆ ಯೋಗ್ಯ ಮಾಡಿ ಭೂಮಿಯನ್ನು ಹಚ್ಚ ಹಸುರಾಗಿಸಿದನಂತೆ. ಶ್ರೀಕೃಷ್ಣನಿಗೆ ಗೋಮಾತೆ ತನ್ನ ಜೀವಕ್ಕಿಂತ ಹೆಚ್ಚಾಗಿತ್ತು. ಶ್ರೀಕೃಷ್ಣ ಗೋವಿನ ಮಹಾಭಕ್ತ. ಚಿಕ್ಕವನಿದ್ದಾಗ ಗೋವಿನ ಬಾಲ ಹಿಡಿದುಕೊಂಡು ಮೇಲೆ ಏಳುತ್ತಿದ್ದನಂತೆ. ಪೂರ್ವಜನ್ಮದಲ್ಲಿ ರಾಜನಾಗಿದ್ದ ಶ್ರೀಕೃಷ್ಣನಿಗೆ ಗೋಪಾಲನೆ ಮಾಡುವುದು ಅಸಾಧ್ಯವಾಯಿತು. ಈ ಜನ್ಮದಲ್ಲಿ ಅದರ ಪೋಷಣೆ ಪಾಲನೆಗೆ ಅನುಮತಿಸಬೇಕೆಂದು ತಾಯಿ ಯಶೋದೆಯಲ್ಲಿ ಕೇಳಿಕೊಂಡಾಗ ರಾಜ ಪುರೋಹಿತರೊಂದಿಗೆ ಸಮಾಲೋಚಿಸಿ ಒಳ್ಳೆಯ ಮುಹೂರ್ತದಲ್ಲಿ ಗೋಮೇಯಿಸಲು ಅನುಮತಿ ನೀಡಿದಳಂತೆ ತಾಯಿ. 

 ಗೋವುಗಳನ್ನು ಕಾಡಿಗೆ ಮೇಯಿಸಲು ಹೊರಟಾಗ ತಾಯಿ ಯಶೋದೆ ಶ್ರೀ ಕೃಷ್ಣನಿಗೆ ರೇಷ್ಮೆಯ ಲೇಪನವಿರುವ ಚಪ್ಪಲಿ ಹಾಕಿಕೊಳ್ಳಲು ಹೇಳುತ್ತಾಳೆ. ಶ್ರೀ ಕೃಷ್ಣ ಹೇಳುತ್ತಾನೆ - ನನಗೆ ಚಪ್ಪಲಿ ಕೊಡುವಿಯಾದರೆ ಎಲ್ಲಾ ಗೋವುಗಳಿಗೂ ಕೊಡು. ನಾನು ಗೋವುಗಳ ಸೇವಕ. ಅವುಗಳು ನನ್ನ ಮಾಲೀಕರು. ಮಾಲೀಕರಿಗಿಲ್ಲದ ಚಪ್ಪಲಿ ನನಗೇಕೆ ಎಂದನಂತೆ ಶ್ರೀ ಕೃಷ್ಣ. ಗೋವುಗಳನ್ನು ಮೇಯಿಸುವಾಗ ಕೈಯಲ್ಲಿ ಕೋಲು ಅಥವಾ ಶಸ್ತ್ರ ಹಿಡಿಯದೆ ಕೊಳಲು ಹಿಡಿಯುತ್ತಿದ್ದ.ಅದರ ಇಂಪು ಸ್ವರದಿಂದಲೇ ಅವುಗಳನ್ನು ಕರೆಯುತ್ತಿದ್ದನಂತೆ. ಅದನ್ನು ನೋಡಲು ದೇವಾದಿ ದೇವತೆಗಳು ಬರುತ್ತಿದ್ದರಂತೆ. ಸಂಧ್ಯಾ ಸಮಯದಲ್ಲಿ ಕೊಳಲಿನ ಗಾನಕ್ಕೆ ಓಡೋಡಿ ಬರುತ್ತಿದ್ದ ಗೋಧೂಳಿಯಿಂದ ಅಲಂಕೃತನಾದ ಶ್ರೀ ಕೃಷ್ಣನ ಮುಖ ಕಮಲದಂತೆ ಅಲೌಕಿಕ ಶೋಭೆಯಿಂದ ಕಂಗೊಳಿಸುತ್ತಿತ್ತು. ಗೋವುಗಳೊಂದಿಗೆ ಶ್ರೀ ಕೃಷ್ಣ - ಅಣ್ಣ ಬಲರಾಮ ಸಹಿತ ಆಟವಾಡುತ್ತಿದ್ದರಂತೆ.

 *ಗೋವುಗಳಿಗೆ ಗೌರವ ಏಕೆ* 

 ನನ್ನ ಹಿಂದೆ -ಮುಂದೆ, ನನ್ನ ಶರೀರ ಸದಾ ಗೋವುಗಳಿಂದ ವ್ಯಾಪಿಸಲಿ. ನಾನು ಸದಾ ಗೋವಿನಲ್ಲಿರುತ್ತೇನೆ ಎಂದು ಶ್ರೀ ಕೃಷ್ಣ ಹೇಳಿದ್ದಾನೆ. ಶ್ರೀ ಕೃಷ್ಣನು ಗೋ ಮತ್ತು ಭಗವದ್ಗೀತೆ ಈ ಎರಡು ಪವಿತ್ರ ವಸ್ತುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿರುತ್ತಾನೆ.ಇದರಿಂದ ನಮ್ಮ ತನು -ಮನ ವರ್ಧಿಸುವುದು. ಶ್ರೀಕೃಷ್ಣ ಗೋವು ನನ್ನ ಜೀವನಕ್ಕೆ ಆಧಾರ,ಗೋವಿಗೆ ಶರಣಾಗಬೇಕು ಎಂದು ಭಗವದ್ಗೀತೆಯಲ್ಲಿ ಸಾರಿರುವನು. ಅವನು ಅದರೊಡನೆ ಜೀವಿಸಿ ಗೋವಿಂದ - ಗೋಪಾಲ ಎಂದೆ ಪ್ರಸಿದ್ಧಿ ಪಡೆದಿರುವನು. ಅದರಿಂದಲೇ ಶ್ರೀಕೃಷ್ಣ ಪ್ರಸಿದ್ಧಿಯಾದನು. ಶ್ರೀ ಕೃಷ್ಣ - ಬಲರಾಮರು ಕೃಷಿ ಸಂಸ್ಕೃತಿಯ ಆರಾಧಕರು. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಊರೂರುಗಳಲ್ಲಿ ಕೆನೆ ತುಂಬಿದ ಮಡಕೆ ಒಡೆಯುವ ಸ್ಪರ್ಧೆ ಏರ್ಪಡಿಸುವ ಇದರ ಅಂತರಾರ್ಥ ಗೋವಿನ ಕೆನೆ, ಹಾಲು ಸಾಕಷ್ಟು ಸಮೃದ್ಧಿ ಆಗಲಿ, ಜನ ಸುಖವಾಗಿರಲಿ ಎಂದು. ಇಂತಹ ಗೋವುಗಳಿಗೆ ನಮಿಸಬೇಕು.

 ಅಥರ್ವವೇದ, ಆಯುರ್ವೇದ, ವೃಕ್ಷಾಯುರ್ವೇದ, ಉಪನಿಷತ್ತು, ಶ್ರೀಮದ್ ಭಾಗವತ, ವಿಷ್ಣುಪುರಾಣ, ಸ್ಕಂದಪುರಾಣ, ಅಗ್ನಿಪುರಾಣ, ಪದ್ಮಪುರಾಣ,ಭವಿಷ್ಯಪುರಾಣ, ಗರುಡಪುರಾಣ, ಬ್ರಹ್ಮ ವೈವರ್ತಪುರಾಣ, ಸ್ಮೃತಿ, ಮನುಸ್ಮೃತಿ, ಪರಾಶರಸ್ಮೃತಿ, ವಸಿಷ್ಠಸ್ಮೃತಿ, ವಿಷ್ಣುಸ್ಮೃತಿ, ಮಹಾಭಾರತ, ಅತ್ರಿಸಂಹಿತಾ, ಬ್ರಹ್ಮಜ್ಜಾತಕ ಹೀಗೆ ಎಲ್ಲಾ ಪವಿತ್ರ ಗ್ರಂಥಗಳಲ್ಲೂ ಗೋವಿನ ಮಹಿಮೆ ಉಲ್ಲೇಖಿತವಾಗಿದೆ. ಪಾಂಡವರು, ಭೀಷ್ಮ ಪಿತಾಮಹ, ವಿರಾಟರಾಜ ಇವರೆಲ್ಲರೂ ಗೋವುಗಳ ಮಹಿಮೆಯನ್ನು ಸಾರಿರುವರು. ಜೈನ, ಭೌದ್ಧ,ಸಿಖ್, ಯಹೂದಿ ಮುಂತಾದ ಧರ್ಮಗಳಲ್ಲೂ ಗೋವುಗಳಿಗೆ ಅತ್ಯಂತ ಪವಿತ್ರ ಸ್ಥಾನವಿತ್ತು. ಭಾರತೀಯ ಸಂಸ್ಕೃತಿಯ ಆರಾಧನಾ ಗ್ರಂಥಗಳು, ಆರಾಧ್ಯ ವ್ಯಕ್ತಿಗಳು ನಡೆದು ತೋರಿದ ಈ ಪುಣ್ಯ ಕಾರ್ಯ ಹಿಂದುಗಳಿಗೆ ಅತ್ಯಂತ ಪವಿತ್ರ ಹಾದಿ. ತಾಯಿಯ ಮೊಲೆ ಹಾಲಿನಿಂದ ಬದುಕು ಕಟ್ಟಿಕೊಳ್ಳುವ ನಾವು, ದೊಡ್ಡವರಾದಂತೆ ಎರಡನೇ ತಾಯಿಯ ಸ್ಥಾನದಲ್ಲಿ ನಿಲ್ಲುವ ಗೋವಿನ ಹಾಲಿನಿಂದ ಆರೋಗ್ಯವಂತ ಬದುಕು ಕಟ್ಟಿಕೊಳ್ಳುತ್ತೇವೆ. ಇಂತಹ ಪವಿತ್ರ ಗೋಮಾತೆಯನ್ನು ನಾವು ವಧಿಸುವುದೆಂದರೆ ಎಷ್ಟು ಸರಿ ?ಪಾಶ್ಚಾತ್ಯರಿಗೆ ಗೋವು ಕೇವಲ ಹಾಲು ಮತ್ತು ಮಾಂಸ ನೀಡುವ ಒಂದು ಪ್ರಾಣಿ ಆಗಿದೆಯಷ್ಟೇ.


 ಕೃಷಿ ಪ್ರಧಾನವಾದ ಭಾರತದಲ್ಲಿ ರೈತನೇ ದೇಶದ ಬೆನ್ನೆಲುಬು. ಹಾಗೆಯೇ ಗೋವು ರೈತನ ಬೆನ್ನೆಲುಬು. ಆದ್ದರಿಂದ ಗೋವಂಶ ನಾಶದಿಂದ ದೇಶದ ಸ್ವಾವಲಂಬಿತನ ನಾಶವಾಗಿ, ದೇಶವು ಬೇರೆ ದೇಶಗಳ ಮೇಲೆ ಅವಲಂಬಿತವಾಗುತ್ತದೆ. ಅದಕ್ಕಾಗಿಯೇ ಸ್ವಾತಂತ್ರ್ಯಾ ನಂತರದಲ್ಲಿ ಹೈನು ಕ್ರಾಂತಿಯ ನೆಪದಲ್ಲಿ ವಿದೇಶಿ ತಳಿಗಳನ್ನು ಪ್ರೋತ್ಸಾಹಿಸಿ ಬೆಲೆ ಕಟ್ಟಲಾಗದ ದೇಶಿ ತಳಿಗಳನ್ನು ಕಡೆಗಣಿಸಲಾಯಿತು. ಹೀಗೆ ಕಡೆಗಣಿಸಿದುದರ ಪರಿಣಾಮವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಕೃಷಿಯಲ್ಲಿ ಹೆಚ್ಚಾಗಿ ನಾವು ತಿನ್ನುವ ಆಹಾರ ವಿಷವಾಯಿತು. ಭೀಕರ ಖಾಯಿಲೆಗಳು ಬಾಧಿಸುತ್ತಿವೆ. ಇದರಿಂದಾಗಿ ಮುಂದೊಂದು ದಿನ ಆಹಾರದ ಕೊರತೆ ದೇಶವನ್ನು ಬಾಧಿಸಲಿದೆ. ಎನ್ನುವುದು ತಜ್ಞರ ಅಭಿಪ್ರಾಯ.

 ನಮ್ಮ ದೇಶದ ಸಾಂಪ್ರದಾಯಿಕ ಗೋ ಪಾಲನೆಯನ್ನು ಕಡೆಗಣಿಸಬಾರದೆಂಬ ಉದ್ದೇಶದಿಂದಲೇ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು ಬಹಳ ಕಾಳಜಿಯಿಂದ ಉಡುಪಿಯ ನೀಲಾವರ ಮುಂತಾದ ಕಡೆಗಳಲ್ಲಿ ಗೋಶಾಲೆ ತೆರೆದು ಸಮಾಜಕ್ಕೆ ಸಂದೇಶ ಸಾರುವ ಕೆಲಸದಲ್ಲಿ ನಿರತರಾಗಿರುವರು. ತಪಸ್ಸಿನೋಪಾದಿಯಲ್ಲಿ ಕೊಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿರುವರು.ಸನಾತನ ಸಂಸ್ಕೃತಿಯ ರಕ್ಷಣೆಯಲ್ಲಿ ಬಹಳ ಪ್ರಶಂಸನೀಯ ಕಾರ್ಯ ವಿದು. ಪೂಜ್ಯರ ಸೇವಾ ಕಾರ್ಯಗಳನ್ನು,ಕಾಳಜಿಯನ್ನು ಬೆಂಬಲಿಸೋಣ.

 *ಟಿ ನಾರಾಯಣ ಭಟ್ ರಾಮಕುಂಜ*
 *ರಾಜ್ಯ -ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು*

Post a Comment

أحدث أقدم