ನೆಲ್ಯಾಡಿ, ಜೂನ್ 17 – ಮಳೆಯ ಕಾಲದ ಆರಂಭದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಹಲವು ಕಡೆಗಳಲ್ಲಿ ಸವಾಲುಗಳು ಎದುರಾಗುತ್ತಿವೆ. ಇತ್ತೀಚಿಗೆ ನೆಲ್ಯಾಡಿ ಸಮೀಪದ ಮಣ್ಣಗುಂಡಿ, ಮರ ಸಂಗ್ರಹಣಾ ಕೇಂದ್ರದ ( ಮರದ ಡಿಪೋ )ಬಳಿ ಭಾರಿ ಮಳೆಯ ಕಾರಣದಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗುಡ್ಡ ಕುಸಿತ ಸಂಭವಿಸಿದೆ.
ಸೋಮವಾರ ರಾತ್ರಿ ಸುರಿದ ಭಾರೀ ಮಳೆಯ ಕಾರಣದಿಂದ ರಸ್ತೆಯ ಪಕ್ಕದಲ್ಲಿ ನಡೆಯುತ್ತಿದ್ದ ರಸ್ತೆ ವಿಸ್ತರಣೆ ಕಾರ್ಯದ ಭಾಗವಾಗಿ ಇರುವ ಭೂಮಿಯು ಕುಸಿದು ಮರಗಳೊಂದಿಗೆ ರಸ್ತೆಗೆ ಬಿದ್ದಿದೆ. ಈ ಕಾರಣದಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಘಟನೆ ನಡೆದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಪಾಯಕಾರಿಯಾಗಿ ನಿಂತಿದ್ದ ಕೆಲವೊಂದು ಮರಗಳನ್ನು ತೆರವುಗೊಳಿಸಿದರು.
ಸ್ಥಳಕ್ಕೆ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಗೌಡ, ಮಾಜಿ ಅಧ್ಯಕ್ಷ ಲೋಕೇಶ್ ಬಾಣಜಾಲ್, ಅಭಿವೃದ್ಧಿ ಅಧಿಕಾರಿ ದೇವಿಕಾ, ಪ್ರಕೃತಿ ವಿಪತ್ತು ನಿರ್ವಹಣ ಸಮಿತಿಯ ಸದಸ್ಯ ರೋಹಿ ಇಚಲಂಪಾಡಿ, ಮತ್ತು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಘಟನೆಯು ರಸ್ತೆ ಸುರಕ್ಷತೆಗೆ ಪಾಠವಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.
ಸ್ಥಳೀಯರು ಹಾಗೂ ಪ್ರಯಾಣಿಕರಿಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯುತವಾಗಿ ಸಂಚರಿಸಲು ವಿನಂತಿಸಿದ್ದಾರೆ.
Post a Comment