ನಮ್ಮನ್ನು ಸಾಕಿ ಸಲಹುವ ಭೂ ಮಾತೆ, ಮನುಕುಲದ ತಾಯಿ, ಮನುಜ ಕುಲದ ಬದುಕಿಗೆ ಕೋಟಿ ಕೋಟಿ ವರುಷಗಳಿಂದ ಆಸರೆಯಾಗಿರುವಳು. ಮನುಜನೊಬ್ಬ ಇಲ್ಲಿ ಜೀವಿಸುವ ಕಾಲ ಒಂದು ಶತಮಾನ ಅಷ್ಟೇ. ಅರ್ಧಭಾಗ ನಿದ್ರಾಕಾಲದಲ್ಲಿರುವನು. ಅರ್ಥಾತ್ 36,525 ದಿನಗಳು. ಆತನ ಬಾಲ್ಯ -ವೃದ್ಧಾಪ್ಯ ಕಳೆದು ಒಂದೈವತ್ತು ವರ್ಷ ನಾನು ನನ್ನದೆಂದು ಬೀಗಬಲ್ಲನು. ಈ ಅಲ್ಪ ಸಮಯದಲ್ಲಿ ಹಲವು ಜನರು ದಾನವೀಯ ಗುಣಗಳಿಂದ ಭೂ ಕಂಟಕರಾದರೆ, ಕೆಲವು ಜನ ಮಾತ್ರ ಮನುಕುಲೋದ್ಧಾರಕರಾಗಿ ಬದುಕು ಸವೆಸುವರು. ವಿಶಾಲ ಜಗತ್ತಿನ ಅಂಗೈಯಗಲದಷ್ಟು ಭಾಗದಲ್ಲಿ ಕೆಲವರು, ಇನ್ನೂ ಕೆಲವರು ದೇಶವ್ಯಾಪಿ ಸಂಸ್ಕೃತಿ ಕಾಪಿಟ್ಟ ಮಹಾಮಹಿಮರು ಇರುವರು. ಕೆಲವರ ಪ್ರಭಾವ ಶತಮಾನಗಳಷ್ಟಾದರೆ, ಸಹಸ್ರಮಾನಗಳಷ್ಟು ಕಾಲ ಜನಮಾನಸದಲ್ಲಿ ಜೀವಿಸುವ ಮಂದಿ ಇತಿಹಾಸ, ಪುರಾಣ ಪ್ರಸಿದ್ಧರಾಗಿಬಿಡುವರು. ಬಲು ಹಿಂದಿನ ಸಾಧನೆಗಳು ಶ್ರುತಿ- ಸ್ಮೃತಿಗಳಲ್ಲಿ ಪ್ರವಹಿಸಿದರೆ ಇಂದಿನದು ಅಕ್ಷರ ರೂಪ ತಾಳಿರುವುದು. ಕೆಲವು ತ್ಯಾಗ ಪುರುಷರ ಸಾಧನೆಗಳನ್ನು ಹುಡುಕುವ ಮನವಿದ್ದವರಿಗೆ ಮೊಗೆದಷ್ಟು ಸಿಗುವುದಿದೆ.
ಕಾಂಚಾನ ಊರ ಹೆಸರನ್ನು ಈಗ ಜನರು ಆಡುವುದು ಕಾಂಚನವೆಂದು. ಇಂದಿಗೂ ಪೇಟೆ ಪಟ್ಟಣದ ರೂಪ ತಾಳದಿರುವ ಪುಟ್ಟ ಊರು. ಅದು ವಾಮನ ರೂಪಿಯಾದರೂ ಶತಮಾನಗಳ ಸಂಗೀತ ಲೋಕದಲ್ಲಿ ಭೀಮ ಹೆಜ್ಜೆ ಇಟ್ಟಿತು. ಅಲ್ಲೇ ಹುಟ್ಟಿ ಬೆಳೆದವರಲ್ಲ, ಎಲ್ಲೋ ಹುಟ್ಟಿ ಎಲ್ಲಿಂದಲೋ ಬಂದು ಕಲಾ ತಪಸ್ಸಿನಿಂದ ದಕ್ಷಿಣ ಭಾರತದಲ್ಲೇ ಸದ್ದು ಮಾಡುವಷ್ಟು ಬೆಳೆದು ನಿಂತ ಕಥೆ ಕಿವಿಗೆ ಬಿದ್ದರೆ ಮೈ ಮನ ಪುಳಕಗೊಳ್ಳದಿರದು. ಹೀಗೂ ಸಾಧ್ಯವೇ ಎಂದು ಅಚ್ಚರಿಯಾಗದಿರದು. ಇಂತಹ ಪವಾಡ ಸದೃಶ ಸಂಗತಿಗಳು ಶತಮಾನಕ್ಕೊಮ್ಮೆ ಕೋಟಿಗೊಬ್ಬನಿಂದ ಕಾಣುವುದಿದೆ.
ಭಾರತ ಮಾತೆಯು ತನ್ನ ಒಡಲಲ್ಲಿ ತುಂಬಿಕೊಂಡ ದೇವಮಂದಿರಗಳು ಎಣಿಕೆ ಮೀರಿ ನಿಂತಿವೆ. ಆಕೆ ಸನಾತನ ಸಂಸ್ಕೃತಿಯ ಐಕ್ಯಗಾನದಿಂದ ಬಾವದಲೆಗಳಿಂದ ದೇಶ ಬೆಸೆದಳು. ಆಧ್ಯಾತ್ಮ ಲೋಕದ ಪ್ರಾಚೀನ ಶಕ್ತಿಪೀಠ ಶೃಂಗೇರಿ. ಮನುಜರಲ್ಲಿ ಭಕ್ತಿಭಾವ ತುಂಬಲು ನೂರಾರು ಶಾಖಾ ಮಠಗಳು ಪುರಾತನದಿಂದಲೂ ಇವೆ. ತೀರಾ ಇತ್ತೀಚಿನವರೆಗೂ ಮಠ ಮಂದಿರಗಳು ಭಕ್ತರು ದಾನ ನೀಡಿದ ಉಂಬಳಿ ಭೂಮಿಗಳ ಆದಾಯಗಳಿಂದ ಉಳಿದು ಬಂದವು. ಸರಕಾರದ ಆಡಳಿತದ ಧೋರಣೆಗಳಿಂದ ಈಗ ಅವೆಲ್ಲವೂ ಕೈತಪ್ಪಿ ಹೋದವು.
ಸುಮಾರು ಎರಡು ಶತಮಾನಗಳ ಪೂರ್ವದಲ್ಲಿ ಸುಬ್ರಹ್ಮಣ್ಯ ಕ್ಷೇತ್ರದ ಶೃಂಗೇರಿ ಶಾಖಾ ಮಠದ ನಿತ್ಯ ನೈಮಿತ್ತಿಕ ಖರ್ಚು ಬಾಬ್ತು ಧನಮೂಲ ಮಠದಿಂದಲೇ ಬರುವುದು ರೂಡಿ. ಅಂದು ಶೃಂಗೇರಿಯಲ್ಲಿ ಕಾಂಚನದ ಸುಬ್ಬಯ್ಯನವರು ಧರ್ಮಾಧಿಕಾರಿ ಆಗಿದ್ದರು. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಧನಧನಕಗಳನ್ನಿತ್ತು ಅರ್ಚಕರ ಕುಶಲ ವಿಚಾರಿಸಲು ಪೀಠಾಧಿಪತಿಗಳು ಸುಬ್ಬಯ್ಯನವರಿಗೆ ಅಪ್ಪಣೆಯಿತ್ತರು. ಇಂದಿನಂತೆ ಸಂಚಾರ ಸಾಧನಗಳಿಲ್ಲದ ಅಂದು, ಎತ್ತಿನಗಾಡಿಯು ಉಳ್ಳವರ ಸಂಚಾರ ಸಾಧನ. ದಾರಿ ಸವೆಸಿ ಬರುತ್ತಾ ಹಸಿವು ನೀಗಿಸಲು, ಆಚಾರಕ್ಕೆ ತಕ್ಕಂತೆ ಇರುವ ಆಪ್ತರ ಬಳಿ ಆಶ್ರಯಕ್ಕಾಗಿ ತನ್ನೂರು ನೇರಂಕಿಯ ಜೈನ ಅರಸರ ಬಳಿ ಬಂದು ರಾಜೋಪಚಾರ ಪಡೆದರು. ಅಂದು ಬ್ರಿಟಿಷರ ಕಂಪೆನಿ ಸರಕಾರದ ಉಪಟಳಗಳಿಂದ ಬಸವಳಿದು ಹೋಗಿದ್ದ ಅರಸರು, ಚೊಕ್ಕ ಅಧಿಕಾರ ನೆರವೇರಿಸಲು ಮಂತ್ರಿಗಳಾಗಿ ನೀವು ಇಲ್ಲೇ ನೆಲೆಸಬೇಕೆಂದು ಬಿನ್ನವಿಸಿದರು. ಸುಬ್ಬಯ್ಯನವರು ಪ್ರೀತಿಗೆ ಕಟ್ಟುಬಿದ್ದು ಕಾಂಚನ ಎಂಬಲ್ಲಿ ನೆಲೆಯಾದರು.
ಸುಬ್ಬಯ್ಯನವರ ಒಂದೆರಡು ತಲೆಮಾರುಗಳ ಅನಂತರದ ಸಂತತಿಯಲ್ಲಿ ಜನಿಸಿದ ಕಾಂಚನ ವೆಂಕಟ್ರಮಣಯ್ಯನವರ ದ್ವಿತೀಯ ಪತ್ನಿ ಕಾಂಚನ ಆನಂದ ಲಕ್ಷ್ಮಿ ಅಮ್ಮಾಳ್. ಪಾಲಕ್ಕಾಡು ಮೂಲದ ಆಕೆ ಸಾವಿರದ ಒಂಬೈನೂರ ಹನ್ನೊಂದರಲ್ಲಿ ಕಾಂಚನಕ್ಕೆ ಎಳವೆಯಲ್ಲಿ ಕಾಲಿಟ್ಟಾಗಲೇ ಸಂಗೀತ ಅನುರಣಿಸಲಾರಂಭಿಸಿತು. ಸಾವಿರದ ಒಂಬೈನೂರ ಇಪ್ಪತ್ತನಾಲ್ಕರಲ್ಲೇ ತನ್ನ ಪತಿ ದೈವಾಧೀನರಾಗುತ್ತಿದ್ದಂತೆ ಮಗ ಕಾಂಚನ ವೆಂಕಟಸುಬ್ರಹ್ಮಣ್ಯಂ ಎರಡು ವರ್ಷ ವಯಸ್ಸಿನ ಎಳೆಗೂಸು. ಸ್ವತಃ ಮಂಗಳೂರು ಮಹಾನಗರದಲ್ಲಿ ಚಕ್ರಕೋಡಿ ನಾರಾಯಣ ಶಾಸ್ತ್ರಿ, ಚೆಂಬೈ ವೈದ್ಯನಾಥ ಭಾಗವತರ್, ಜಿ ಎನ್ ಬಾಲಸುಬ್ರಹ್ಮಣ್ಯಂ, ಮೈಸೂರು ಟಿ.ಚೌಡಯ್ಯ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಮುಂತಾದ ಸಂಗೀತ ಲೋಕದ ದಿಗ್ಗಜರನ್ನೆಲ್ಲ ಕರೆಸಿ ಕಚೇರಿ ನಡೆಸಿದ ದಿಟ್ಟೆ ಅವರು. ಸಂಸಾರ ಸಾಗಿಸುವ ಬಲು ದೊಡ್ಡ ಹೊಣೆ ಇದ್ದರೂ ಮಗ ವೆಂಕಟಸುಬ್ರಮಣ್ಯಂ ಅವರನ್ನು ಸಂಗೀತ ಲೋಕದ ಮೇರು ಶಿಖರವೇರಿಸಬೇಕೆಂದು ಕನಸು ಕಂಡವರು. ಶಾಸ್ತ್ರೀಯ ಸಂಗೀತದ ಎಲ್ಲಾ ಪಟ್ಟುಗಳನ್ನು ಮಗನಿಗೆ ಧಾರೆಯೆರೆದರು.
ತಾಯಿ ಕಂಡ ಕನಸು ಮಗ ವೆಂಕಟಸುಬ್ರಹ್ಮಣ್ಯಂ ಅವರಲ್ಲಿ ತಪಸ್ಸಿನೋಪಾದಿಯಲ್ಲಿ ಬೆಳೆದು ಹೆಮ್ಮರವಾಯಿತು . ಕರಾವಳಿಯ ಸಂಗೀತದ ಕಂಪು ಹಬ್ಬಿಸಲು ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆ (ರಿ) ಕಾಂಚನ, ತೆರೆದರು. ಅದಕ್ಕೆ ಆಸರೆಯಾಗಿರಲು ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. ಅವರ ಮಗ ಕಾಂಚನ ವಿ. ಸುಬ್ಬರತ್ನಂ ಅವರ ಪತ್ನಿ ರೋಹಿಣಿ ಸುಬ್ಬರತ್ನಂ. ತಂದೆ ಮಗ ಇಬ್ಬರು ಕಾಂಚನದ ಹೆಸರನ್ನು ನಾದಲೋಕದಲ್ಲಿ ಮನೆ ಮಾತಾಗುವಂತೆ ಬೆಳೆಸಿರುವುದು ಇತಿಹಾಸ. ಕಾಂಚನದ ತ್ಯಾಗರಾಜೋತ್ಸವ, ಪುರಂದರೋತ್ಸವಗಳಲ್ಲಿ ಭಾಗವಹಿಸುವುದೆಂದರೆ ಕಲಾವಿದರಿಗೆ ಬಲು ಗೌರವವೆಂದು ತಿಳಿದು ಇಲ್ಲಿ ಬರುವರು.
ಕಲೆ ಬೆಳೆಗಲು ಕಲಾವಿದರ ಕುಟುಂಬ ಗಟ್ಟಿ ಇರಬೇಕು. ಹಳ್ಳಿಗಳ ಹಳ್ಳಿಯಾಗಿದ್ದ ಕಾಂಚನ ಊರಿಗೆ ಬಂದರೆ ಹೊಟ್ಟೆ ತುಂಬಲು ಅನ್ನದಾನಿ ಮನೆಗಳಿಂದ ಮಾತ್ರ ಸಾಧ್ಯ. ಕಾಂಚನ ವಿ ಸುಬ್ಬರತ್ನಂ ಸಂಗೀತ ಲೋಕದ ನಿತ್ಯ ಸಂಚಾರಿ. ರಾತ್ರಿ ಹಗಲೆನ್ನದೆ ಊರು ಸುತ್ತುವ ಸಂಗೀತ ಋಷಿ ಅವರು. ದಾನ ಧರ್ಮಾದಿಗಳಿಗೆ ಹೆಸರಾದ ಕಾಂಚನ ಮನೆತನ ಕಲಾ ದಿಗ್ಗಜರಿಗೆ ಧರ್ಮಶಾಲೆ ಇದ್ದಂತಿತ್ತು. ಕಲಾವಿದರು ನಿತ್ಯವೂ ಯಾತ್ರಿಕರಂತೆ ಬರುವರು. ಊಟೋಪಚಾರ ವಸತಿ ಒಂದೆಡೆಯಾದರೆ ಮನೆ ತುಂಬಾ ನಾದಮಯ. ಉಪ್ಪಿನಂಗಡಿಯಂತಹ ಪಟ್ಟಣದಿಂದ ಹಲವು ಮೈಲು ನಡೆದು ದಿನಸಿ, ಸಾಂಬಾರ ವಸ್ತು ತಂದರೆ ಮಾತ್ರ ಮನೆಯಲ್ಲಿ ಒಲೆ ಹಚ್ಚಲು ಸಾಧ್ಯ. ನಾದ ಲೋಕದ ಕದ ತೆರೆಯಬಲ್ಲ ಮನೆಯೊಡತಿ ಪತಿಯ ಒತ್ತಾಸೆಯಾಗಿ ಬಲ ತುಂಬಿದರೆ ಮಾತ್ರ ನಾದಮಯವಾಗಲು ಸಾಧ್ಯ. ಸರಸ್ವತಿ ಮಾತೆಯ ಅನುಗ್ರಹದಿಂದ, ಕಾಂಚನ ಮಣ್ಣಿನ ಪುಣ್ಯಫಲದಿಂದ, ದಾನ ಧರ್ಮಾದಿಗಳ ಫಲದಿಂದ ಕಾಂಚನ ಸುಬ್ಬರತ್ನಂ ಅವರ ಮಡದಿಯಾಗಿ ಕಾಲಿಟ್ಟ ರೋಹಿಣಿ ಭಾಗ್ಯಲಕ್ಷ್ಮಿ ಎನಿಸಿದರು.
1960ರ ಕಾಲದಲ್ಲಿ ಸಂಗೀತ ಪರೀಕ್ಷೆಗಳಿಗೆ ಇದ್ದ ಬೋರ್ಡುಗಳಲ್ಲಿ ವಿದ್ವತ್ ಪರೀಕ್ಷೆಯ ಬೋರ್ಡು ಇದ್ದದ್ದು ಬೆಂಗಳೂರು, ಮೈಸೂರು, ಇನ್ನೊಂದು ಕಾಂಚನ ಮಾತ್ರ. ಸಂಗೀತ ಪರೀಕ್ಷೆಗಾಗಿ ಕಾಂಚನ ಸಂಗೀತ ಶಾಲೆಗೆ ಅನೇಕ ವಿದ್ವಾಂಸರು ಬರುತ್ತಿದ್ದರು. ತಿಟ್ಟೆ ಕೃಷ್ಣ ಅಯ್ಯಂಗಾರ್, ಎಸ್. ಎನ್. ಮರಿಯಪ್ಪ, ಚೆಲುವರಾಯಸ್ವಾಮಿ, ಆರ್. ಚಂದ್ರಶೇಖರಯ್ಯ, ಸತ್ಯನಾರಾಯಣ, ವೀಣೆ ಚೊಕ್ಕಮ್ಮ, ಶೇಷಪ್ಪ, ಪಲ್ಲವಿ ಚಂದ್ರಪ್ಪ ಮುಂತಾದ ಅನೇಕ ವಿದ್ವಾಂಸರೂ, ಮಹಾರಾಜಪುರಂ ಸಂತಾನಂ ಕುಟುಂಬದವರಂತಹ ಘಟಾನುಘಟಿ ವಿದ್ವಜ್ಜನರೂ ಆಗಮಿಸುತ್ತಿದ್ದರು. ಇಂತಹ ಖ್ಯಾತನಾಮರ ಉಪಚಾರದ ಹೊಣೆ ರೋಹಿಣಿಯವರದು. ಭೋಜನ ಸಮಯವಿರಲಿ, ಗೋವುಗಳ ಹಾಲು ಹಿಂಡುವ ಸಮಯವಿರಲಿ, ಉಡುಪಿ ಮಂಗಳೂರಿಗೆ ಸಂಚರಿಸುವ ಸಂಗೀತ ದಿಗ್ಗಜರು ಕಾಂಚನವನ್ನೊಮ್ಮೆ ಕಂಡು ಹೋಗಬೇಕೆಂದು ಬರುವುದಿತ್ತು. ತಟ್ಟನೆ ಇದ್ದುದರಲ್ಲಿ ಉಪಚರಿಸುವ ಚಾಣಾಕ್ಷಮತಿ ಆಕೆ.
ರೋಹಿಣಿ ಸುಬ್ಬರತ್ನಂ ಸಂಗೀತ ಲೋಕ ಕಂಡ ಅಸಾಮಾನ್ಯ ಮನೆತನದ ಸುಸಂಸ್ಕೃತ ಹೆಣ್ಣು ಮಗಳು. ಪದ್ಮಶ್ರೀ ಪುರಸ್ಕೃತ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರ ಸುಪುತ್ರಿ. ಅಭಿಜಾತ ಹುಟ್ಟು ಕಲಾವಿದೆ. ತಂದೆ ಕೆಮೆಸ್ಟ್ರಿ ಪ್ರೊಫೆಸರ್ ಆಗಿದ್ದವರು. ಸಂಗೀತಶಾಸ್ತ್ರವೇ ಅವರ ಉಸಿರಾಗಿತ್ತು. ಮನದ ಗುಡಿಯಲ್ಲಿ ಅನುಕ್ಷಣವು ಆರಾಧನೆ ಇತ್ತು. ಶ್ರೀವಿದ್ಯೆಯ ಉಪಾಸಕರು. ಶ್ರುತಿ- ತಾಳ- ಪ್ರಬಂಧ, ಸ್ವರಪ್ರಸ್ತಾರಗಳ ಮೂಲ ತಿಳಿಯಲು ಅವರು ಬರೆದ ಕೃತಿಗಳ ಪುಟ ತಿರುವು ಹಾಕಬೇಕು. ಅನೇಕ ಆಕರ ಗ್ರಂಥಗಳ ಸೃಷ್ಟಿಕರ್ತರು. ಅವರದು ಗಾಯಕ -ವೈಣಿಕರ ಸಮೃದ್ಧ ಕುಟುಂಬ.
ಭಾವ ಪ್ರಪಂಚದ ಬೆರಗು ಸಂಗೀತ. ಸಂಗೀತ ಪರಂಪರೆಯಲ್ಲಿ ಆಳವಾಗಿ ಬೇರೂರಿ ಅದರ ಸತ್ವವನ್ನು ಹೀರಿ ಬೆಳೆದವರು ರೋಹಿಣಿ ಸುಬ್ಬರತ್ನಂ. ಕಾಂಚನದ ಪ್ರಶಾಂತ ಪರಿಸರದ ನಾದ ಮಂದಿರ, ಅಂತರಂಗದ ನಾದ ಪೂಜೆಗೆ ದೇಗುಲವಾಯಿತು. ತಾಳ - ಲಯ ಕೇವಲ ಸಂಗೀತಕ್ಕೆ ಮಾತ್ರವಲ್ಲ, ಬಾಳಿಗೂ ಲಯಬದ್ಧತೆ ಇರಬೇಕು. ಆಗಲೇ ಬಾಳು ಆಗುವುದು ಎಂಬುದನ್ನು ನಿತ್ಯ ನಿರೂಪಿಸಿದರು. ಚೆಲುವು ಹೊರಗಿರುವುದಲ್ಲ, ಕಣ್ಣಲ್ಲಿ ಮಾತ್ರ ತುಂಬಿಕೊಳ್ಳುವಂತಿರುವುದಲ್ಲ ಎಂದು ತಿಳಿದಿದ್ದರು. ರಾಗವು ಕಿವಿಯಲ್ಲಿ ತುಂಬುವುದು. ಎದೆಯ ಭಿತ್ತಿಯಲು ಬಿತ್ತಬಹುದೆಂದು ಬದುಕಿ ತೋರಿದರು. ಭಾವಝರಿಯ ನೆನಪುಗಳ ನವಿಲುಗರಿಯಾದರು. ಹಾರುವ ಹಕ್ಕಿಗೆ ಏಣಿಬೇಕೆ ? ಈಜುವ ಮೀನಿಗೆ ದೋಣಿ ಬೇಕೆ ? ನಾದಸಾಗರದಲ್ಲೇ ಈಜಾಡಿದ ರೋಹಿಣಿಯವರಿಗೆ ಇವೆಲ್ಲವೂ ನಿತ್ಯ ಕರ್ಮವಾಯಿತು. ಎಲ್ಲ ಕನಸುಗಳ ಕಣ್ಣಲ್ಲಿ ಕೂಡಿಟ್ಟರೆ ಕಣ್ಣೀರು ಉರುಳಿಸಬಲ್ಲದೆಂಬ ಅರಿವಿದ್ದ ಆಕೆ, ಹೃದಯದ ಬಟ್ಟಲಲಿ ತುಂಬಿಟ್ಟು ಪ್ರೇರಣೆ ಪಡೆದರು. ಬಿಂಬದಂತೆ ಪ್ರತಿಬಿಂಬವಾದರು.
ರೋಹಿಣಿಯವರ ಸಾಹಿತ್ಯ ಸಿರಿ, ಒಳಿತು ಕೆಡುಕುಗಳ ನಿಖರವಾಗಿ ಅಳೆದು ತೂಗುವ ಗುಣ ನಿಧಿ. ಸಂಗೀತದ ಒಳ ಹೊರಗು ಬಲ್ಲ ಸಾಮರ್ಥ್ಯ ಅಪಾರ. ಸಂಗೀತ ಸಾಗರದ ನೆನಪುಗಳ ನೇವರಿಸುತ್ತಾ ನನಗೇನು ತಿಳಿಯದೆಂಬಂತೆ ಇರುತ್ತಾ, ಎಲ್ಲವನ್ನು ತಿಳಿದಿರುವರು. ತಿಳಿಯ ಬಯಸುವರು. ಮನದ ತಂತಿ ಮೀಟಿ ಭಾವ ತುಂಬಿ ಬಿಡುವರು. ಕಿವಿ ತುಂಬುವ ರಾಗದಿಂದ ಮನ ತುಂಬಿಕೊಳ್ಳುತ್ತಾ, ನೋವುಗಳ ಮರೆತು ಬಿಡುವರು. ಆಳ ಅಧ್ಯಯನದ ಬಲುಹು ಅವರಿಗಿದೆ. ಹಾಡುಗಳ ಗುನುಗುತ್ತಲೇ ಬದುಕಿನ ಪಾಡನ್ನು ಸೈರಿಸುವ ಬಲ ತುಂಬಿಕೊಂಡಿರುವರು.
ಅತ್ಯುತ್ತಮ ಶೈಲಿಯಿಂದ ಹೃದಯಕ್ಕೆ ಆಪ್ಯಾಯಮಾನವಾಗುವಂತಹ ಭಾಷೆಯಲ್ಲಿ ಲೇಖನಗಳನ್ನು ಬರೆಯಬಲ್ಲರು. ಇವರು ಸಂಗೀತ ಕ್ಷೇತ್ರಕ್ಕೆ ಮಾರ್ಗದರ್ಶನ ನೀಡಬಲ್ಲ ಆರೋಹಿಣಿ ಎಂಬ ಕೃತಿಯನ್ನು ಹೊರತಂದಿರುತ್ತಾರೆ. ಹಲವಾರು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟ ಆಗಿವೆ.
ಸೃಷ್ಟಿಕರ್ತ ಕಲೆಗಾರ ಗಿಣಿಗೆ ಹಸಿರು ಕೊಟ್ಟ, ಕೋಗಿಲೆಗೆ ಕಂಠಸಿರಿ ಇಟ್ಟ, ರೋಹಿಣಿಯವರಿಗೆ ಮನೆ ಮನ ಕಟ್ಟುವ ಬಲ ಕೊಟ್ಟ. ನೂರಾರು ಎಕರೆಗಳ ಭೂಸ್ವರ್ಗದ ಒಡೆಯರಾದ ಈ ಮನೆತನದಲ್ಲಿ ದೈವ -ದೇವಾಲಯ, ಹಬ್ಬ- ಹರಿದಿನ, ನೇಮ- ಜಾತ್ರೆ ಎಡೆಬಿಡದೆ ನಡೆಯಬೇಕು. ಸುಂದರ ಮನೆ ಕಟ್ಟಲು ಇಟ್ಟಿಗೆಗಳ ಒಂದಾಗಿಟ್ಟಂತೆ, ಗಟ್ಟಿ ಮನೆತನ ಕಟ್ಟಲು ಮನಗಳ ಸುಂದರವಾಗಿ ಬೆಸೆದರು. ಬಾಲ್ಯದಲ್ಲೇ ಅಮ್ಮನು ಅಗಲಿ ಹೋದರು. ಇಪ್ಪತ್ತು ವರ್ಷಗಳ ಹಿಂದೆಯೇ ಪತಿ ಇಲ್ಲವಾದರೂ ಧೃತಿಗೆಡಲಿಲ್ಲ. ಪ್ರಕೃತಿಯ ಚೆಲುವಲ್ಲಿ ಒಲವು ಕಂಡರು.
ಕುಟುಂಬದ ದೈವ - ದೇವಾಲಯಗಳ ಪುನರುತ್ಥಾನಗಳಿಗೆ ಆಸರೆಯಾದರು. ಊರ ಜನರ ಬೆಸೆದರು. ಮಾವ, ಪತಿ ಸ್ಥಾಪಿಸಿದ ಸಂಗೀತ ಶಾಲೆ, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳನ್ನು, ಕರಾವಳಿಯ ಕಾಮಧೇನು ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ಕೈಗಿಟ್ಟು ಮುನ್ನಡೆಸುತ್ತಿರುವರು. ವಯೋ ಸಹಜ ಬಳಲಿಕೆ ಸಾಕು ಸಾಕೆನಿಸುವಷ್ಟು ಬೆನ್ನಟ್ಟಿದರೂ ಸೋಲೊಪ್ಪಿಕೊಳ್ಳದೆ ಸಚೇತನವಾಗಿರುವರು.
ಕಾಂಚನ ವಿ. ಸುಬ್ಬರತ್ನಂ - ರೋಹಿಣಿ ಸುಬ್ಬರತ್ನಂ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳು. ವಿದುಷಿ ಶ್ರೀರಂಜನಿ ಮತ್ತು ವಿದುಷಿ ಶ್ರುತಿರಂಜನಿ ಬೆಂಗಳೂರಿನಲ್ಲಿ ಖ್ಯಾತ ಸಂಗೀತ ಸಾಧಕರಾಗಿ ಚಿರಪರಿಚಿತರು. ಶ್ರೀರಂಜನಿಯವರ ಪತಿ ಕೆ.ಯು ಜಯಚಂದ್ರ ರಾವ್ ಖ್ಯಾತ ಮೃದಂಗ ವಿದ್ವಾಂಸರು. ಶ್ರುತಿರಂಜನಿ ಅವರ ಪತಿ ರಾಜಶೇಖರ್ ಹಿಲ್ಯಾರು ಖ್ಯಾತ ಹೈಕೋರ್ಟ್ ವಕೀಲರು. ಇನ್ನೊಬ್ಬ ಮಗಳು ಸಂಗೀತ ಸಾಧಕಿ ಸುಮನಸರಂಜನಿ. ಈಕೆಯ ಪತಿ ಇಂಜಿನಿಯರ್ ರಾಸುಮಪ್ರಸಾದ್ ಇವರು ಅಮೆರಿಕದಲ್ಲಿ ಬದುಕು ಕಟ್ಟಿಕೊಂಡಿರುವರು.
ಕಾಂಚನ ವಿ. ಸುಬ್ಬರತ್ನಂ ಮನೆತನದ ಸಂಗೀತ ಲೋಕದ ಸಾಧನೆ ಕಂಡು ಸಂಭ್ರಮಿಸಿದವರಲ್ಲಿ ನಾನೂ ಓರ್ವನು. ಅವರೊಂದಿಗೆ ಬಹುಕಾಲದ ನಂಟು ನನ್ನದು. ಬಾಲ್ಯದಲ್ಲಿ ಸಂಗೀತ ಆರಾಧನೆ ಕಣ್ತುಂಬಿಕೊಂಡ ಸಂತಸ ನನ್ನದು. ಸಂಗೀತದ ನಿತ್ಯ ಪೂಜೆ ಕಾಂಚನದಲ್ಲಿ ಚಿರಾಯುವಾಗಲಿ.
*ಟಿ ನಾರಾಯಣ ಭಟ್ ರಾಮಕುಂಜ*
*ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು*
Post a Comment