ಕಡಬ ಪಟ್ಟಣ ಪಂಚಾಯತ್ ಚುನಾವಣೆ: ನೀತಿ ಸಂಹಿತೆ ಜಾರಿ; ಚುನಾವಣಾಧಿಕಾರಿಗಳ ನೇಮಕ, ರಾಜಕೀಯ ಪಕ್ಷಗಳ ಸಭೆ.

ಕಡಬ: ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಜುಲೈ 29ರಿಂದಲೇ (ಮಂಗಳವಾರ) ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ.

ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮಂಗಳವಾರ ಸಂಜೆ ಕಡಬ ತಾಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು ಪ್ರಮುಖ ರಾಜಕೀಯ ಪಕ್ಷಗಳ ಸಭೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ತಿಳಿಸಿದರು.

ಚುನಾವಣಾ ಸಂಬಂಧಿತ ಎಲ್ಲ ಚಟುವಟಿಕೆಗಳಿಗೆ ಕೇಂದ್ರವಾಗಿ ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಚುನಾವಣೆ ಕಚೇರಿ ತೆರೆಯಲಾಗಿದೆ. ಉಪ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ಶಾಯಿದುಲ್ಲಾ ಖಾನ್ ಅವರು ನೀಡಿದ ಮಾಹಿತಿಯಂತೆ, ನಾಮಪತ್ರ ಸಲ್ಲಿಕೆ ಜುಲೈ 29ರಿಂದಲೇ ಆರಂಭವಾಗಿದ್ದು, ಪ್ರತಿದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಜುಲೈ 29ರಂದು ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

ಮುಖ್ಯ ದಿನಾಂಕಗಳು:

ನಾಮಪತ್ರ ಸಲ್ಲಿಕೆ ಅಂತಿಮ ದಿನ: ಆಗಸ್ಟ್ 5

ನಾಮಪತ್ರಗಳ ಪರಿಶೀಲನೆ: ಆಗಸ್ಟ್ 6

ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ: ಆಗಸ್ಟ್ 8

ಮತದಾನ ದಿನ: ಆಗಸ್ಟ್ 17

ಮರು ಮತದಾನ (ಅವಶ್ಯಕವಿದ್ದರೆ): ಆಗಸ್ಟ್ 19

ಮತ ಎಣಿಕೆ: ಆಗಸ್ಟ್ 20, ಬೆಳಿಗ್ಗೆ 8 ಗಂಟೆಯಿಂದ





ಚುನಾವಣಾ ನೀತಿ ಸಂಹಿತೆ ಜುಲೈ 29ರಿಂದ ಆಗಸ್ಟ್ 20ರವರೆಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಯಲ್ಲಿರಲಿದೆ. ಒಟ್ಟು 13 ವಾರ್ಡ್‌ಗಳ ಮತದಾನಕ್ಕಾಗಿ 13 ಮತಗಟ್ಟೆಗಳು ನಿರ್ಧರಿಸಲಾಗಿದೆ. ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳನ್ನು ಮತಗಟ್ಟೆಗಳಾಗಿ ಬಳಸಲಾಗುತ್ತಿದೆ. ಚುನಾವಣೆಯು ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಮೂಲಕ ನಡೆಯಲಿದ್ದು, ಮತದಾನ ಬಳಿಕ ಇವುಗಳನ್ನು ತಾಲೂಕು ಕಚೇರಿಯ ಭದ್ರತಾ ಕೊಠಡಿಯಲ್ಲಿ ಇಡಲಾಗುತ್ತದೆ.

ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿರುವ ಎಲ್ಲಾ ಬ್ಯಾನರ್, ಫ್ಲೆಕ್ಸ್‌ಗಳು ಹಾಗೂ ಬಂಟಿಂಗ್‌ಗಳನ್ನು ತೆರವುಗೊಳಿಸಲಾಗಿದೆ.

ಮತದಾರರ ಪಟ್ಟಿಯಲ್ಲಿ ಅಸಮರ್ಪಕತೆಗಳ ಕುರಿತು ಬಂದಿರುವ ದೂರುಗಳಿಗೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಚರ್ಚೆ ನಡೆಸಿ ತಪ್ಪುಗಳನ್ನು ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಇ. ಉಪಸ್ಥಿತರಿದ್ದರು.

ಚುನಾವಣಾಧಿಕಾರಿಗಳ ನೇಮಕ:

ವಾರ್ಡ್ 1 ರಿಂದ 7 (ಕಳಾರ, ಕೋಡಿಬೈಲು, ಪನ್ಯ, ಬೆದ್ರಾಜೆ, ಮಾಲೇಶ್ವರ, ಕಡಬ, ಪಣೆಮಜಲು):

ಚುನಾವಣಾಧಿಕಾರಿ: ವಿಮಲ್ ಬಾಬು (ಸುವ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ)

ಸಹಾಯಕ ಚುನಾವಣಾಧಿಕಾರಿ: ಭುವನೇಂದ್ರ ಕುಮಾರ್ ಎಂ. (ತಾಲೂಕು ಪಂಚಾಯತ್ ವ್ಯವಸ್ಥಾಪಕ - ಪ್ರಭಾರಿ)


ವಾರ್ಡ್ 8 ರಿಂದ 13 (ಪಿಜಕಳ, ಮೂರಾಜೆ, ದೊಡ್ಡಕೊಪ್ಪ, ಕೋಡಿಂಬಾಳ, ಮಜ್ಜಾರು, ಪುಳಿಕುಕ್ಕು):

ಚುನಾವಣಾಧಿಕಾರಿ: ಪ್ರಮೋದ್ ಕುಮಾರ್ ಕೆ.ಕೆ. (ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಸುಬ್ರಹ್ಮಣ್ಯ ವಿಭಾಗ)

ಸಹಾಯಕ ಚುನಾವಣಾಧಿಕಾರಿ: ಸಂದೇಶ್ ಕೆ.ಎನ್. (ವಿಕಾಸಾಧಿಕಾರಿ, ಕೊಯಿಲ ಗ್ರಾ.ಪಂ.)

Post a Comment

أحدث أقدم