ಕಡಬ, ಜುಲೈ 22 – ಕಡಬ ತಾಲೂಕಿನ ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀದಿಗುಡ್ಡೆ ಕಾಂಜಿಯಲ್ಲಿ ಬಳ್ಪ, ಎಡಮಂಗಲ ಹಾಗೂ ಸುಬ್ರಹ್ಮಣ್ಯ ಪ್ರದೇಶದ ಕೃಷಿ ಸಖಿಯರ ಸಹಕಾರದೊಂದಿಗೆ ಕೃಷಿಕರಿಗಾಗಿ ಮಾದರಿ ನೇಜಿ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅಡಿಲು ಬಿದ್ದ ಭೂಮಿಯನ್ನು ಕೃಷಿಗೆ ತರುವ ಆಶಯದಿಂದ 1.5 ಎಕರೆ ಗದ್ದೆಯಲ್ಲಿ ನಡೆಸಲಾದ ಈ “ಒಂಜಿ ದಿನ ನೇಜಿ ನಾಟಿ” ಚಟುವಟಿಕೆಯಲ್ಲಿ ಕಡಬ ತಾಲೂಕಿನ ಎಲ್ಲಾ ಕೃಷಿ ಸಖಿ, ಪಶು ಸಖಿ, ಸ್ಥಳೀಯ ಮನೆಯ ಸದಸ್ಯರು, ಸ್ವಸಹಾಯ ಗುಂಪುಗಳ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಕೃಷಿ ಇಲಾಖೆ ಪಂಜ ರೈತ ಸಂಪರ್ಕ ಕೇಂದ್ರ, ಕಡಬ ತಾಲೂಕು ಪಂಚಾಯತ್ ಹಾಗೂ ಡೇ ಎನ್‌ಆರ್‌ಎಲ್‌ಎಂ ಯೋಜನೆಯ ಸಹಕಾರದೊಂದಿಗೆ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕೈಗೊಂಡು ಸ್ವತಃ ನೇಜಿ ನಾಟಿಯಲ್ಲಿ ಭಾಗವಹಿಸಿದ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಕುಮಾರ್ ಭಂಡಾರಿ ಎಚ್., ಭತ್ತ ಬೆಳೆಯುವ ಅವಶ್ಯಕತೆ ಹಾಗೂ ಪೀಳಿಗೆಯ ಆಹಾರ ಭದ್ರತೆ ಕುರಿತು ಬೆಳಕು ಚೆರೆದರು. ಅವರು ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ಸಹಾಯವಾಗುವಂತೆ ಇಲಾಖೆಯ ವಿವಿಧ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದೆಂದು ತಿಳಿಸಿದರು.
ಪುತ್ತೂರು ವಿಭಾಗದ ಕೃಷಿ ಉಪನಿರ್ದೇಶಕರಾದ ಶ್ರೀ ಶಿವಶಂಕರ್ ಅವರು ಪ್ರಸ್ತುತ ಕೃಷಿಯ ಅವಶ್ಯಕತೆ ಹಾಗೂ ರೈತ ಪಾಠ ಶಾಲೆಯ ಮೂಲಕ ತಾಂತ್ರಿಕ ಮಾಹಿತಿ ನೀಡುವ ಪ್ರಾತ್ಯಕ್ಷಿಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಲ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಹರ್ಷಿತ್ ಕಾರ್ಜ, ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಎಡಮಂಗಲ ಪಂಚಾಯತ್ ಅಧ್ಯಕ್ಷ ರಾಮಣ್ಣ ಗೌಡ ಜಾಲ್ತರ್, ಮತ್ತು ಪಂಚಾಯತ್ ಸದಸ್ಯರು ಭಾಗವಹಿಸಿದರು.
ಡೇ ಎನ್‌ಆರ್‌ಎಲ್‌ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ., ಕೃಷಿ ಚಟುವಟಿಕೆ ಬ್ಲಾಕ್ ಮ್ಯಾನೇಜರ್ ಮೋಹನ್, ಸಂಪನ್ಮೂಲ ವ್ಯಕ್ತಿಗಳು ಧನ್ಯಶ್ರೀ, ರಮ್ಯ, ಪಂಜ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕಿ ಸೀಮಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
ಜಮೀನಿನ ಮಾಲೀಕರು ನಾರಾಯಣ ಮಣಿಯಾಣಿ ಮತ್ತು ಅವರ ಸಹೋದರರು ತಮ್ಮ ಗದ್ದೆ ಕಾರ್ಯಕ್ಕೆ ನೀಡಿದ ಸಹಕಾರ ಮೆಚ್ಚುಗೆಗೆ ಪಾತ್ರವಾಯಿತು.
ಸ್ಥಳೀಯ ಶಾಲೆಗಳಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಪ್ಯಾಡಿ ಮತ್ತು ಬೀದಿಗುಡ್ಡೆಯ ಮಕ್ಕಳು ಸಹ ಗದ್ದೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ವಿಶೇಷಗೊಳಿಸಿದರು.
ಒಕ್ಕೂಟದ ಸದಸ್ಯರು, ಪದಾಧಿಕಾರಿಗಳು, ಗ್ರಾಮ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಲಲಿತಾ, ಕೃಷಿ ಸಖಿ ಹೇಮಾವತಿ, ಪಶುಸಖಿ ಚಿತ್ರಾವತಿ ಮತ್ತಿತರರು ಸಮರ್ಪಿತ ಸಹಕಾರ ನೀಡಿದರು.
ಇಂತಹ ಕಾರ್ಯಕ್ರಮಗಳು ಸಮೂಹದೃಷ್ಟಿಯಿಂದ ಸಮುದಾಯ ಕೃಷಿ ಚಟುವಟಿಕೆಗಳಿಗೆ ಮಾದರಿಯಾಗಿದ್ದು, ಭವಿಷ್ಯದಲ್ಲಿ ಹೆಚ್ಚು ರೈತರು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
Post a Comment