ಕಡಬ ತಾಲೂಕು ಇಚಲಂಪಾಡಿ ಬಿಲ್ಲವ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂನ್ 6 ರಂದು ಇಚಲಂಪಾಡಿ ಬಿಲ್ಲವ ಸಂಘದ ಕಟ್ಟಡದಲ್ಲಿ ಸಂಭ್ರಮದಿಂದ ನೆರವೇರಿತು.
ಸಭೆಗೆ ಇಚಲಂಪಾಡಿ ಬಿಲ್ಲವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ನಿಡ್ಯಡ್ಕ ಸಭಾಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಇಂದ್ರ ಪೂಜಾರಿ ಉದ್ಘಾಟನಾ ಭಾಷಣದಲ್ಲಿಯೇ ನಾರಾಯಣ ಗುರುಗಳ ತತ್ತ್ವಚಿಂತನ, ಶಾಂತಿ, ಸೌಹಾರ್ದತೆ ಹಾಗೂ ಏಕತೆಯ ಮಹತ್ವವನ್ನು ಪ್ರಸ್ತಾಪಿಸಿದರು. ಪುತ್ತೂರು ಬಿಲ್ಲವ ಸಂಘದ ಆಶ್ರಯದಲ್ಲಿ ಇಚಲಂಪಾಡಿ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗರ್ವದಿಂದ ಸ್ಮರಿಸಿದರು. ಬಿಲ್ಲವ ಸಮಾಜದ ಮೂಲ ಪುರುಷರಾದ ಕೋಟಿ ಚೆನ್ನಯ್ಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾ. ಬಿಲ್ಲವ ಸಂಘದ ಕೋಶಾಧಿಕಾರಿ ಶ್ರೀ ಮಹೇಶ್ ಚಂದ್ರ, ಸಮಾಜದ ಏಕತೆಯ ಬಗ್ಗೆ ಒತ್ತಿಹೇಳಿದರು. "ದುಶ್ಚಟಗಳಿಂದ ದೂರವಿದ್ದು, ಒಗ್ಗಟ್ಟು ನಮ್ಮ ಶಕ್ತಿ ಆಗಬೇಕು. ಸಂಘರ್ಷವಲ್ಲ, ಸಮರಸ್ಯವೇ ನಮ್ಮ ನಂಬಿಕೆ" ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಸಮಿತ್, ಹರ್ಷಿತ್, ಸಹನಾ, ಯಶ್ವಿತಾ, ಮೌಲ್ಯ ಮತ್ತು ಕೀರ್ತನ್ ಇವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಅಂಗನವಾಡಿಯಿಂದ 7ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳಿಗೆ ಶಾಲಾ ಕೊಡೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯ ಹಾಗೂ ಪ್ರಮೀಳಾ ಪ್ರಾರ್ಥನೆ ಸಲ್ಲಿಸಿದರು. ದೇವಿಪ್ರಸಾದ್ ಸ್ವಾಗತಿಸಿದರು, ಬಾಲಕೃಷ್ಣ ಕೋಟೆಗುಡ್ಡೆ ವರದಿ ವಾಚಿಸಿದರು. ವಿನೋದ್ ಕುಮಾರ್ ಲೆಕ್ಕಪತ್ರ ಮಂಡನೆ ಮಾಡಿದರೆ, ಧನ್ಯವಾದ ವಿನೋದ್ ಸಮರ್ಪಿಸಿದರು. ಸಮಾರಂಭದ ನಿರೂಪಣೆಯನ್ನು ಕುಮಾರಿ ಮೌಲ್ಯ ಮಾಡಿದರು.
Post a Comment