ಸುಬ್ರಹ್ಮಣ್ಯ, ಜುಲೈ 11:
"ನಮ್ಮ ಪರಿಸರ ನಮ್ಮ ಶ್ವಾಸಕೋಶ. ಇವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ," ಎಂದು ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳು 'ಪರಿಸರ ಉಳಿಸಿ' ಅಭಿಯಾನವನ್ನು ಉದ್ಘಾಟಿಸುತ್ತಾ ಹೇಳಿದ್ದಾರೆ.
ಜಸ್ಟಿಸ್ ಕೆ ಎಸ್ ಹೆಗಡೆ ಚಾರಿಟೇಬಲ್ ಆಸ್ಪತ್ರೆ, ಎಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದೇರಳಕಟ್ಟೆ, ನಿಟ್ಟೆ ಯುನಿವರ್ಸಿಟಿ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸೀನಿಯರ್ ಚೇಂಬರ್, ಕಕ್ಕೆಪದವ ಸಮಾಜ ಸೇವಾ ಟ್ರಸ್ಟ್, ಅರಣ್ಯ ಇಲಾಖೆ ಹಾಗೂ ಇನ್ನರ್ ವೀಲ್ ಕ್ಲಬ್ ಇದರ ಜೊತೆಯಾಗಿ ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ, “ನಾವು ವರ್ಷಕ್ಕೂ ವರ್ಷ ಗಿಡಗಳನ್ನು ನೆಡುತ್ತೇವೆ, ಆದರೆ ಅವುಗಳ ಪೋಷಣೆ ಹಾಗೂ ಸಂರಕ್ಷಣೆ ಮುಖ್ಯ. ಪರಿಸರವನ್ನು ಕಾಪಾಡುವುದು ನಮ್ಮ ನೈತಿಕ ಕರ್ತವ್ಯ," ಎಂದು ಸ್ಪಷ್ಟವಾಗಿ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ, ನಿಟ್ಟೆ ಯುನಿವರ್ಸಿಟಿಯ ವೈಸ್ ಚಾನ್ಸಲರ್ ಡಾ. ಸತೀಶ್ ಭಂಡಾರಿ ಮಾತನಾಡುತ್ತಾ, “ಹನುಮೋತ್ಸವದ ಅಂಗವಾಗಿ ಹಮ್ಮಿಕೊಂಡ ಈ ಪರಿಸರ ಅಭಿಯಾನ, ಎಲ್ಲರಲ್ಲೂ ಪರಿಸರ ಜಾಗೃತಿ ಮೂಡಿಸಲು ನೆರವಾಗಲಿದೆ,” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಾ. ರಾಘವೇಂದ್ರ ಹುಚ್ಚಣ್ಣನವರ್ (ನಿಟ್ಟೆ ರೂರಲ್ ಹೆಲ್ತ್ ಸೆಂಟರ್), ಡಾ. ಹೌದ್ರಿ ಡಿ. ಕ್ರೂಸ್ (ಸಮುದಾಯ ಆರೋಗ್ಯ ವಿಭಾಗ), ಕುಕ್ಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯ ಅಶೋಕ ನಿಕ್ರಾಜೆ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರೊ. ಕೆ.ಆರ್. ಶೆಟ್ಟಿಗಾರ್, ರೋಟರಿ ಕ್ಲಬ್ ನ ಚಂದ್ರಶೇಖರ ನಾಯರ್, ಸೀನಿಯರ್ ಚೇಂಬರ್‌ನ ಗೋಪಾಲ ಎಣ್ಣೆ ಮಜಲ್, ವೈದ್ಯಾಧಿಕಾರಿ ಡಾ. ವಿಕ್ರಂ ಶೆಟ್ಟಿ, ದಂತ ವೈದ್ಯ ಡಾ. ಚರಣ್ ಶೆಟ್ಟಿ, ಕಕ್ಕೆಪದವದ ಡಾ. ರವಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಇನ್ನರ್ ವೀಲ್ ಕ್ಲಬ್‌ನ ವಿಮಲಾ ರಂಗಯ್ಯ ಸ್ವಾಗತಿಸಿದರು. ಸದಾನಂದ ಆಸ್ಪತ್ರೆಯ ಮೋಹನ್ ಪಳ್ಳಿ ಗದ್ದೆ ವಂದಿಸಿದರು.
Post a Comment