ಸುಬ್ರಹ್ಮಣ್ಯ, ಜುಲೈ 23:ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ. ಹೊನ್ನಪ್ಪ (52) ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಇಂದು ಹೊನ್ನಪ್ಪ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತನಾಡಿದರು.
ಶಾಸಕಿ ಅವರು ನಾಪತ್ತೆಯ ಹಿನ್ನೆಲೆ, ಪೊಲೀಸರು ಹಾಗೂ SDRF ತಂಡಗಳಿಂದ ನಡೆಯುತ್ತಿರುವ ಶೋಧ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು, ಪತ್ನಿ ಶ್ರೀಮತಿ ಪ್ರೇಮ ಅವರೊಂದಿಗೆ ನೇರವಾಗಿ ಸಂವಾದ ನಡೆಸಿ ಸಾಂತ್ವನ ಹೇಳಿದರು. “ಈ ಕಷ್ಟದ ಸಂದರ್ಭದಲ್ಲಿ ಸರ್ಕಾರದ ಹಾಗೂ ಜಿಲ್ಲೆಯ ಆಡಳಿತದ ಸಂಪೂರ್ಣ ಸಹಕಾರ ನಿಮ್ಮೊಂದಿಗೆ ಇರುತ್ತದೆ. ಶೋಧ ಕಾರ್ಯಗಳಲ್ಲಿನ ಪ್ರಗತಿಯನ್ನು ನಾನು ನೇರವಾಗಿ ಗಮನಿಸುತ್ತೇನೆ,” ಎಂದು ಶಾಸಕಿ ಭರವಸೆ ನೀಡಿದರು.
ಇದಕ್ಕೂ ಮೊದಲು, ದಿನಾಂಕ 22 ಜುಲೈ 2025ರಂದು ಬೆಳಿಗ್ಗೆ 9.00 ಗಂಟೆಗೆ ಹೊನ್ನಪ್ಪ ಕೆಲಸಕ್ಕೆ ಹೊರಟ ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿದ್ದು, ನದಿ ದಡದ ಕಡೆಗೆ ನಡೆದಿರುವ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ ದೃಢಪಟ್ಟಿದೆ. ಇದರಿಂದಾಗಿ SDRF (State Disaster Response Force) ತಂಡ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ಶೋಧ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಸಮಾಜ ಸೇವಕ ಡಾ. ರವಿಕಕ್ಕೆಪದವು, ಮತ್ತು ಸುಮಾರು 30–40 ಯುವಕರು ಸಹ ಭಾಗಿಯಾಗಿದ್ದು, ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಸ್ಥಳಕ್ಕೆ ಆಗಮಿಸಿ ನದಿಯ ತಳಭಾಗ ಶೋಧನೆ ನಡೆಸುತ್ತಿದ್ದಾರೆ.
ಇಡೀ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಅವರ ಭೇಟಿ ನಾಪತ್ತೆಯ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿಸಿದೆ.
Post a Comment