ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಭಾರೀ ಮಳೆಯ ನಡುವೆ ಮೆಸ್ಕಾಂ ಸಿಬ್ಬಂದಿಗಳಿಂದ 11 ಕೆ.ವಿ ವಿದ್ಯುತ್ ಮಾರ್ಗ ದುರಸ್ತಿ: ಶ್ಲಾಘನೀಯ ಶ್ರಮ.

ಕುಕ್ಕೆ ಸುಬ್ರಹ್ಮಣ್ಯ: ಇಲ್ಲಿನ ಕಾಶಿಕಟ್ಟೆ ಬಳಿ ಭಾನುವಾರ ಸಂಜೆ ಸಂಭವಿಸಿದ ಭಾರೀ ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ತೊಂದರೆಗೆ ಒಳಗಾದ ಹಿನ್ನೆಲೆಯಲ್ಲಿ, ಮೆಸ್ಕಾಂ ಸಿಬ್ಬಂದಿಗಳು ಭಾರೀ ಮಳೆಯ ನಡುವೆಯೇ ಪರಿಶ್ರಮದೊಂದಿಗೆ 11 ಕೆ.ವಿ. ವಿದ್ಯುತ್ ಲೈನ್‌ನ್ನು ದುರಸ್ತಿಪಡಿಸಿ, ಕುಕ್ಕೆ ಸೇರಿದಂತೆ ಹಲವು ಗ್ರಾಮೀಣ ಭಾಗಗಳಿಗೆ ಮತ್ತೆ ವಿದ್ಯುತ್ ಪೂರೈಕೆ ಮಾಡಲು ಯಶಸ್ವಿಯಾಗಿದ್ದಾರೆ.

ಆದಿತ್ಯವಾರ ಸಂಜೆ 4 ಗಂಟೆ ಸುಮಾರಿಗೆ ಸುರಿದ ಭಾರೀ ಗಾಳಿಗೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಭಾರೀ ಗಾತ್ರದ ಮರವೊಂದು ಮುಖ್ಯ ವಿದ್ಯುತ್ ತಂತಿಗಳ ಮೇಲೆ ಬಿದ್ದಿತು. ಪರಿಣಾಮವಾಗಿ 2 ಬೃಹತ್ ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ, ಇನ್ನೆರಡು ಕಂಬಗಳು ವಾಲಿ ನಿಂತಿದ್ದವು. ತಂತಿಗಳು ಸಂಪೂರ್ಣ ಹಾನಿಗೊಂಡವು. ಕೂಡಲೇ ಕಾರ್ಯಪ್ರವೃತ್ತರಾದ ಮೆಸ್ಕಾಂ ಸಿಬ್ಬಂದಿಗಳು ಭಾನುವಾರ ಸಂಜೆಯಿಂದಲೇ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದರು.

ಸೋಮವಾರ ದಿನವಿಡೀ ಕಾರ್ಯ ಮುಂದುವರಿದಿದ್ದು, ಮಳೆ ನಡುವೆಯೂ ಮರ ತೆರವು, ಹಾನಿಗೊಂಡ ಕಂಬಗಳು ಹಾಗೂ ತಂತಿಗಳನ್ನು ಸಂಪೂರ್ಣವಾಗಿ ತೆಗೆಯಲಾಯಿತು. ನಂತರ ನಾಲ್ಕು ಹೊಸ ಕಂಬಗಳನ್ನು ಸ್ಥಾಪಿಸಿ, ತಂತಿಗಳನ್ನು ಪುನರ್‌ಜೋಡಿಸಿ ಸಂಜೆ 7.30ರ ಹೊತ್ತಿಗೆ ದುರಸ್ತಿ ಪೂರ್ಣಗೊಳ್ಳಿತು.

ಈ ಕಾರ್ಯವನ್ನು ಮೆಸ್ಕಾಂ ಅಭಿಯಂತರ ಸತೀಶ್ ಸಫಲ್ಯ ಅವರ ನಿರ್ದೇಶನದಲ್ಲಿ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅಭಿಯಂತರ ಚಿದಾನಂದ ಕೆ. ಕನ್ನಡ್ಕ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ದೇವಪ್ಪ ಅಂಜೇರಿ, ಪಾಲಾಕ್ಷಯ್ಯ, ಚಂದ್ರಕಾಂತ್ ಸೇರಿದಂತೆ 20ಕ್ಕೂ ಹೆಚ್ಚು ಮೆಸ್ಕಾಂ ಸಿಬ್ಬಂದಿಗಳು ನಿರಂತರವಾಗಿ ಕೆಲಸಮಾಡಿ ಸೇವಾ ಭದ್ರತೆ ಒದಗಿಸಿದರು.

ಅರ್ಧ ದಿನ ವಿದ್ಯುತ್ ವ್ಯತ್ಯಯ:
ಆದಿತ್ಯವಾರ ಸಂಜೆ ೪ ಗಂಟೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸೋಮವಾರ ಸಂಜೆ 7.45ರ ಹೊತ್ತಿಗೆ ಸಂಪೂರ್ಣವಾಗಿ ಸಮರ್ಪಕಗೊಂಡಿತು. ಇದು 11 ಕೆ.ವಿ ಪ್ರಧಾನ ಲೈನ್ ಆಗಿದ್ದರಿಂದ ಕುಕ್ಕೆ ಸುಬ್ರಹ್ಮಣ್ಯ, ಐನೆಕಿದು, ಬಾಳುಗೋಡು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ನಡುಗಲ್ಲು ಸೇರಿದಂತೆ ಹಲವಾರು ಗ್ರಾಮೀಣ ಪ್ರದೇಶಗಳಿಗೆ ವ್ಯತ್ಯಯ ಉಂಟುಮಾಡಿತ್ತು.

ಸಾರ್ವಜನಿಕರಿಂದ ಮೆಸ್ಕಾಂ ಶ್ಲಾಘನೆ:
ಅವಿರತ ಮಳೆಯ ನಡುವೆಯೂ ಶ್ರಮಿಸಿ, ಶೀಘ್ರದಲ್ಲಿ ವಿದ್ಯುತ್ ಪೂರೈಕೆಯನ್ನು ಪುನರಾರಂಭಿಸಿದ್ದಕ್ಕಾಗಿ ಮೆಸ್ಕಾಂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಸ್ಥಳೀಯ ಜನತೆ ಶ್ಲಾಘಿಸಿದ್ದಾರೆ.

Post a Comment

Previous Post Next Post