ಮಂಗಳೂರು, ಜುಲೈ 3, 2025 – ಮಂಗಳೂರು ಸಿಸಿಬಿ ಪೊಲೀಸರು ಮತ್ತೊಂದು ಮಹತ್ವದ ಕಾರ್ಯಾಚರಣೆಯಲ್ಲಿ ಕುಖ್ಯಾತ ದನಕಳ್ಳನನ್ನು ಸೆರೆಹಿಡಿದಿದ್ದಾರೆ. ನಿಷೇಧಿತ ಮಾದಕ ವಸ್ತು ಎಂಡಿಎಂಎ (MDMA) ಅನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಆರೋಪಿ, ಕಂಬಳ ಪದವು ಕೆಐಡಿಬಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಮಂಗಳೂರು ನಗರದ ಪೊಲೀಸ್ ಕ್ವಾಟ್ರಸ್ ರಸ್ತೆಯ ಆಸೈಗೋಳಿ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದ
ಅಬ್ದುಲ್ ಕಬೀರ್ @ ಪಾರಿವಾಳ ಕಬೀರ್ (ವಯಸ್ಸು: 36) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ 12.05 ಗ್ರಾಂ ಎಂಡಿಎಂಎ, ರೂ. 1,20,000/- ಮೌಲ್ಯದ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ ಯಂತ್ರ, ಮೊಬೈಲ್ ಫೋನ್ ಹಾಗೂ KA-25-MA-8950 ನಂಬರ್‌ನ ಬಿಳಿ ಬಣ್ಣದ ಸ್ವಿಫ್ಟ್ ಕಾರು ಸಹಿತ ಒಟ್ಟು ರೂ. 4,31,250/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆರೋಪಿಯ ಹಿಂದಿನ ಅಪರಾಧ :
ಅಬ್ದುಲ್ ಕಬೀರ್ ವಿರುದ್ಧ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಹಲವೆಡೆ —
ಪಣಂಬೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಪೂರ್ವ, ಕಂಕನಾಡಿ ನಗರ, ಉಳ್ಳಾಲ, ಬಜ್ಪೆ, ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ (ಕೊಡಗು ಜಿಲ್ಲೆ)ಗಳಲ್ಲಿ 15 ಕ್ಕೂ ಹೆಚ್ಚು ದನ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಈ ಪ್ರಕರಣಗಳಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ಇತ್ತೀಚಿನ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನು, ಇದೀಗ ಮಾದಕ ವಸ್ತು ಸಾಗಣೆ ಹಾಗೂ ಮಾರಾಟದಲ್ಲಿ ತೊಡಗಿದ್ದ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸಿಸಿಬಿ ತಂಡದ ಯಶಸ್ವಿ ಕಾರ್ಯಾಚರಣೆ:
ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡ ಭಾಗವಹಿಸಿದ್ದರಿಂದ ಮತ್ತೊಂದು ಅಪರಾಧಿ ಪೊಲೀಸರ ವಶಕ್ಕೆ ಬಂದಿದ್ದಾನೆ.
Post a Comment