ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ — ಇರ್ವತ್ತೂರಿನ ಯುವಕನ ವಿರುದ್ಧ ಪ್ರಕರಣ ದಾಖಲು.

ಮಂಗಳೂರು, ಜುಲೈ 3:
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಂತಿ ನೆಮ್ಮದಿಗೆ ಭಂಗ ತರಲಿಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟ ವ್ಯಕ್ತಿಗಳ ವಿರುದ್ಧ ಪೊಲೀಸರು ಗಂಭೀರ ಕ್ರಮ ಕೈಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನದಂತೆ ರಚಿಸಲಾದ ವಿಶೇಷ ತನಿಖಾ ತಂಡವು ಇರ್ವತ್ತೂರು ಗ್ರಾಮದ ಆಶಿಕ್ ಎಸ್ ಕೋಟ್ಯಾನ್ (25) ಎಂಬ ಯುವಕನನ್ನು ಗುರುತಿಸಿ ಬಂಧಿಸಿದೆ. ಆರೋಪಿಯು ಇನ್‌ಸ್ಟಾಗ್ರಾಂ ನಲ್ಲಿ “ನಮಗೆ ಯಾವುದೇ ರೀತಿಯ ಉತ್ತರಗಳು ಬೇಡ, ರಕ್ತಕ್ಕೆ ರಕ್ತವೇ ಉತ್ತರವಾಗಬೇಕು, ಜೀವಕ್ಕೆ ಜೀವವೇ ಬೇಕು” ಎಂಬ ರೀತಿಯ ಪ್ರಚೋದನಕಾರಿ ಸ್ಟೇಟಸ್‌ನ್ನು ಹಾಕಿದ್ದನು.

ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯಾ ಸಂಹಿತೆ 2023ರ ಕಲಂ 196, 353(2), 351(3)ರಡಿಯಲ್ಲಿ ಠಾಣಾ ಅಪರಾಧ ಸಂಖ್ಯೆ 85/2025 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಸೆನ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಆಶಿಕ್ ಎಸ್ ಕೋಟ್ಯಾನ್‌ನನ್ನು ಇಂದು (ಜುಲೈ 3) ಬಂಧಿಸಿ, ವಿಚಾರಣೆ ನಡೆಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿಗೆ ಧಕ್ಕೆಯುಂಟುಮಾಡುವ ಅಥವಾ ಹಿಂಸೆಗೆ ಪ್ರೇರಣೆಯಾದ ಮಾಹಿತಿಗಳನ್ನು ಹರಿಬಿಟ್ಟರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Post a Comment

Previous Post Next Post