ವೈದ್ಯ ಕೆಎಸ್ ಶೆಟ್ಟಿ ವಿಜಯ ವೈದ್ಯಶಾಲಾ ಉಪ್ಪಿನಂಗಡಿ.


          *ಕಂಬನಿ*
 ಸುಮಾರು 25 ವರ್ಷಗಳ ಹಿಂದಿನ ಕಥೆ. ಹಳ್ಳಿಗಳಲ್ಲಿ ಯಾವ ಅಲೋಪತಿ ವೈದ್ಯರು ಇದ್ದರೂ ಕೂಡ ಕಾಯಿಲೆ ಕಸಾಲೆಗಳಿಗೆ ಮೊದಲ ಭೇಟಿ ಪಂಡಿತರ ಬಳಿ. ಹಳ್ಳಿ ಜನಕ್ಕೆ ಪಂಡಿತರ ಮುಖ ಪರಿಚಯ ಹೊರತು, ಅವರ ಹೆಸರು ಕೇಳಿದವರಿಲ್ಲ. ಅವರಿಗೆ ಬೇಕಾಗಿಯೂ ಇಲ್ಲ. ಅವರ ಅಂಗಡಿಯ ಹೆಸರು ಮೊದಲೇ ತಿಳಿಯದು. ಹಳ್ಳಿಗರ ಬಾಯಲ್ಲಿ ಬರುವ ಪರಿಚಯದ ಹೆಸರು ಏನೆಂದರೆ ಹಳೆ ಬಸ್ ಸ್ಟ್ಯಾಂಡಿನ ಬಳಿಯ ಪಂಡಿತರು. (ಪರ ಬಸ್ ಸ್ಟ್ಯಾಂಡ್ ದ ಪಂಡಿತೆರ್) 

 ವಾಯುವಿನ ಮಾತ್ರೆ, ಮಕ್ಕಳಿಗೆ ಚಿಹ್ನೆಯ ಮಾತ್ರೆ, ಕಸ್ತೂರಿ ಮಾತ್ರೆ, ಪುಷ್ಕರಾಮೃತ, ದಶಮೂಲಾರಿಷ್ಟ, ಬಲಾರಿಷ್ಠ ಇವೆಲ್ಲ ಸಾಮಾನ್ಯ ಯಾವುದೇ ಕಾಯಿಲೆಗಳಿಗೆ ರಾಮಬಾಣ. ಅದು ಪಂಡಿತರ ಅಂಗಡಿಯಿಂದಲೇ ಆಗಬೇಕು. ಅದೇ ಬ್ರ್ಯಾಂಡ್ ಬೇರೆ ಎಲ್ಲೂ ಸಿಕ್ಕರೂ ಕಾಯಿಲೆ ಕಡಿಮೆ ಆದಂತೆ ಅನ್ನಿಸದು. ಅದು ಕೆ ಎಸ್ ಶೆಟ್ಟರ ಪವರ್. ಅವರು ಎರಡು ಮಾತು ಹೇಳಿ ಕೈಯೆತ್ತಿ ಕೊಟ್ಟರೆ ಮಾತ್ರ ಕಾಯಿಲೆ ಕಡಿಮೆಯಾದೀತು. ಅದಕ್ಕೆ ಕಾರಣವೂ ಜನರಿಗೆ ಗೊತ್ತು. ಅದು ಅವರ ಕೈ ಪಲಿತ. ಒಂದು ವೇಳೆ ಅದರಿಂದ ಕಡಿಮೆ ಆಗದೆ ಹೋದರು ಜನ ಚಿಂತಿಸರು. ಅಷ್ಟೊಂದು ನಂಬಿಕೆ.

 ಅವರ ವ್ಯಾಪ್ತಿ ಉಪ್ಪಿನಂಗಡಿಗೆ ಮಾತ್ರ ಅಲ್ಲ. ಮಗಳನ್ನು ಕೊಟ್ಟ ಮನೆಗೂ ಇಲ್ಲಿಂದಲೇ ಸಪ್ಲೈ ಆಗುತ್ತದೆ. ಆ ಔಷಧಿಗಳನ್ನು ಹಿಡಿದುಕೊಂಡು ಮಗಳ ಮನೆಗೆ ಹೋಗಿ ಕೊಟ್ಟಾಗಲೇ ಪುಳ್ಳಿಯಂದಿರ ಕಾಯಿಲೆ ಕಡಿಮೆಯಾದೀತು. ಅಷ್ಟು ಸಾಕೇ? ಸೊಸೆಯಂದಿರ ತವರು ಮನೆಗೂ ಇಲ್ಲಿಂದಲೇ ಸಪ್ಲೈ ಆಗಬೇಕು .  

 ತಲೆಗೆ ಮುಂಡಾಸು ಕಟ್ಟಿ, ಬಾಯಲ್ಲಿ ವೀಳ್ಯದೆಲೆ ಅಡಿಕೆ ಜಗಿಯುತ್ತಾ, ಅಂಗಡಿ ಬಳಿಯ ಮಾರ್ಗದಲ್ಲಿ ನಡೆದು ಹೋದಾಗ ಪಂಡಿತರ ಮುಖವನ್ನು ನೋಡಿ ಮಾತನಾಡದೆ ಹೋದರೆ ಉಪ್ಪಿನಂಗಡಿಯ ಭೇಟಿ ತೃಪ್ತಿ ನೀಡದು. ಅಷ್ಟೊಂದು ಅವಿನಾಭಾವ ಸಂಬಂಧ. ಸುಬ್ರಹ್ಮಣ್ಯದಿಂದ ಧರ್ಮಸ್ಥಳದವರೆಗೆ, ಶಿರಾಡಿ ಯಿಂದ ಬಂಟ್ವಾಳದವರೆಗೆ ಹರಡಿಕೊಂಡಿದ್ದ ಕಾಲವದು.  

 ಇಂದು ವೈದ್ಯರು ಎಷ್ಟೇ ಜನರಿರಲಿ ಪಂಡಿತರ ಮಕ್ಕಳು ನಡೆಸುವ ಅಂಗಡಿಯ ಒಂದೆರಡು ಕಷಾಯ ಒಂದೆರಡು ಮಾತ್ರೆ ಮನೆಯಲ್ಲಿ ಇದ್ದರೆ ಅದು ಒಂದು ಮನೆಗೆ ರಕ್ಷೆ ಇದ್ದಂತೆ. ಮನೆಯಲ್ಲೊಂದು ಕಷಾಯ ಬೇಕೇ ಬೇಕು. ಅದು ಪಿತ್ರಾರ್ಜಿತ ನಂಬಿಕೆ ಎಂದರೆ ತಪ್ಪಿಲ್ಲ.  

 ತುಂಬು ಬಾಳು ಬಾಳಿದ ನಗುಮೊಗದ, ಕಿರು ದೇಹದ ಶೆಟ್ಟರು ನಮ್ಮೊಂದಿಗೆ ಇಲ್ಲವಾಗಿರುವರು. ಆದರೆ ಅಂತಹ ಸತ್ಪರಂಪರೆಯನ್ನು ಸಾರುವ ಅವರ ಮಕ್ಕಳು ಅಪ್ಪನನ್ನು ಸದಾ ನೆನಪಿಸುವಂತಿರುವರು. ಮಕ್ಕಳನ್ನು ಹೊರದೇಶಕ್ಕೆ ಅಟ್ಟಲಿಲ್ಲ. ಪರವೂರಿಗೆ ಕಳುಹಿಸಲಿಲ್ಲ. ಉಪ್ಪಿನಂಗಡಿಯಲ್ಲೇ ಇದ್ದು ಹಿರಿಯರ ವೃತ್ತಿಗೆ ಗೌರವ ಸಲ್ಲಿಸುತ್ತಿರುವರು. ಇಂತಹ ಸಂಸ್ಕೃತಿ ನಶಿಸುತ್ತಿರುವ ಕಾಲದಲ್ಲಿ ಊರ ಮಂದಿಗೆ ಸಂತಸ ಕೊಡುವ ಸಂಗತಿ ಇದು ಎನ್ನಲು ಅಡ್ಡಿ ಇಲ್ಲ. ನಾನು ಕೂಡ ಪಂಡಿತರ ಅಂಗಡಿಯ ಕಸ್ತೂರಿ ಮಾತ್ರೆ, ದಶಮೂಲಾರಿಷ್ಠ, ಚಿನ್ಹೆ ಮಾತ್ರೆಗಳಿಂದಲೇ ಬೆಳೆದವನು. ಅಂತಹ ಪ್ರೀತಿ ಈ ನಾಲ್ಕು ಸಾಲುಗಳನ್ನು ಬರೆಸಿತು. ಜನಪ್ರಿಯ ಪಂಡಿತರ ಸದ್ಗತಿಗಾಗಿ ದೇವರಲ್ಲಿ ಪ್ರಾರ್ಥಿಸೋಣ.

 *ಟಿ ನಾರಾಯಣ ಭಟ್ ರಾಮಕುಂಜ*.

Post a Comment

أحدث أقدم