ಧರ್ಮಸ್ಥಳ, ಆ. 5:ಧರ್ಮಸ್ಥಳ-ಸುಬ್ರಹ್ಮಣ್ಯ ಮಾರ್ಗದಲ್ಲಿ ಇಂದು ಮಧ್ಯಾಹ್ನ ನಡೆದ ಘಟನೆ ಜನರಲ್ಲಿ ಆತಂಕವನ್ನು ಮೂಡಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಧರ್ಮಸ್ಥಳ ಘಟಕದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್‌ಗೆ ಕಲ್ಲು ತೂರಾಟ ನಡೆದಿದ್ದು, ಬಸ್‌ನ ಮುಂಭಾಗದ ಗ್ಲಾಸು ಜಖಂಗೊಂಡಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿವಾಸಿ ಹಾಗೂ ಸಂಚಾರ ನಿಯಂತ್ರಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ. ದಾವೂದ್ (54) ಅವರು ನೀಡಿದ ದೂರಿನಂತೆ, ದಿನಾಂಕ 05.08.2025 ರಂದು ಮಧ್ಯಾಹ್ನ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಪುದುವೆಟ್ಟು ಕ್ರಾಸ್ ಬಳಿ ಎದುರಿನಿಂದ ಬಂದ ಅಜ್ಞಾತ ದ್ವಿಚಕ್ರ ವಾಹನ ಸವಾರನೊಬ್ಬ ಬಸ್‌ಗೆ ಕಲ್ಲು ಎಸೆದಿದ್ದಾನೆ.
ಈ ಕೃತ್ಯದಿಂದ ಸುಮಾರು ₹15,000 ನಷ್ಟ ಸಂಭವಿಸಿದೆ ಎಂದು ದೂರು ನೀಡಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 45/2025ರಂತೆ ಭಾರತೀಯ ದಂಡ ಸಂಹಿತೆಯ ಕಲಂ 324(3) ಬಿಎನ್‌ಎಸ್ ಮತ್ತು ಕಲಂ 2(ಎ) ಕೆಪಿಡಿಎಲ್‌ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿ ಇದೆ.
ಘಟನೆಯ ಹಿಂದಿರುವ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳೀಯರು ಹಾಗೂ ವಾಹನ ಸವಾರರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Post a Comment