ಬೆಳ್ತಂಗಡಿಯಲ್ಲಿ ದನ ಸಾಗಣೆ ಪ್ರಕರಣ – ಕಾರು ಡಿಕ್ಕಿ, ಒಬ್ಬ ಆರೋಪಿಯ ಬಂಧನ, ಇಬ್ಬರು ಪರಾರಿ!!


ಬೆಳ್ತಂಗಡಿ
:ದಿನಾಂಕ 13.08.2025 ರಂದು ಬೆಳಿಗ್ಗೆ, ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಇನ್ನೋವಾ ಕಾರಿನಲ್ಲಿ (KA 19 MP 2084) ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸ್ ಮಾಹಿತಿಯ ಪ್ರಕಾರ, ಚಿಕ್ಕಮಗಳೂರಿನ ಮುಡಗೇರಿಯಿಂದ ಮೂರು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಚಾರ್ಮಾಡಿ ಮಾರ್ಗವಾಗಿ ಮಂಗಳೂರು ಕಡೆಗೆ ಅತೀವೇಗದಲ್ಲಿ ಹಾಗೂ ದುಡುಕುತನದಲ್ಲಿ ಚಲಿಸುತ್ತಿದ್ದ ಕಾರನ್ನು ಬೆಳ್ತಂಗಡಿ ಠಾಣಾ ಪೊಲೀಸರು ಗುರುವಾಯನಕೆರೆ ಎಂಬಲ್ಲಿ ತಡೆಹಿಡಿಯಲು ಪ್ರಯತ್ನಿಸಿದರು. ಆದರೆ, ವಾಹನ ನಿಲ್ಲಿಸದೆ ಪರಾರಿಯಾಗುವ ಯತ್ನದಲ್ಲಿ ಕಾರು ಒಂದು ಆಟೋ ರಿಕ್ಷಾ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತು.

ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು, ಕಾರು ಚಾಲನೆ ಮಾಡುತ್ತಿದ್ದ ಮೂಡಬಿದ್ರೆ ಸುವರ್ಣನಗರದ ಆರಿಫ್ (26) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪರಾರಿಯಾದ ಇಬ್ಬರನ್ನು ಮೂಡಬಿದ್ರೆ ಸುವರ್ಣನಗರದ ರಜ್ವಾನ್ (30) ಹಾಗೂ ಸಾಯಿಲ್ (22) ಎಂದು ಗುರುತಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಮೂವರು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ದೃಢಪಟ್ಟಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Post a Comment

Previous Post Next Post