ಕುಕ್ಕೆ ಸುಬ್ರಹ್ಮಣ್ಯ – ನಮ್ಮೆಲ್ಲರ ನಂಬಿಕೆ, ಭಕ್ತಿ, ಶ್ರದ್ಧೆಯ ನೆಲೆ, ಪವಿತ್ರ ಪುಣ್ಯಕ್ಷೇತ್ರ. ಪ್ರತಿದಿನ ಲಕ್ಷಾಂತರ ಭಕ್ತರು ಬರುವ ಈ ತಾಣದಲ್ಲಿ ಶುದ್ಧತೆ, ಪವಿತ್ರತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಇದೇ ಉದ್ದೇಶದಿಂದ ಆಗಸ್ಟ್ 15ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಮುಂದಾಳತ್ವದಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಶುಚಿತ್ವ ಜಾಗೃತಿ ಕಾರ್ಯಕ್ರಮ ನಡೆಯಿತು.
ರಥ ಬೀದಿಯ ವ್ಯಾಪಾರಸ್ಥರು, ಅಂಗಡಿ ಕಟ್ಟಡ ಬಾಡಿಗೆದಾರರಿಗೆ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಹಾನಿ, ದೇವಳದ ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು. ಪ್ಲಾಸ್ಟಿಕ್ ನಿಷೇಧ ಕುರಿತ ಮಾಹಿತಿ ಪತ್ರಗಳನ್ನು ಹಂಚಿ, ತ್ಯಾಜ್ಯ ಸಂಗ್ರಹಿಸಲು ವಿಶೇಷ ವಿನ್ಯಾಸದ ಕಸದ ತೊಟ್ಟಿಗಳನ್ನು ಬಿಡುಗಡೆ ಮಾಡಲಾಯಿತು.
ಆಗಸ್ಟ್ 15ರಿಂದ ಕುಕ್ಕೆ ಪ್ರದೇಶದಲ್ಲಿ ಸಿಗರೇಟ್, ಗುಟ್ಕಾ, ಪ್ಲಾಸ್ಟಿಕ್ ಚೀಲ ಹಾಗೂ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಸಂಪೂರ್ಣ ನಿಷೇಧವಾಗಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. "ಕುಕ್ಕೆಗೆ ಬರುವ ಪ್ರತಿಯೊಬ್ಬ ಭಕ್ತರೂ ಪರಿಸರ ಸಂರಕ್ಷಕರಾಗಬೇಕು, ಈ ಪವಿತ್ರ ತಾಣವನ್ನು ಶುದ್ಧವಾಗಿರಿಸುವ ಜವಾಬ್ದಾರಿ ನಮ್ಮೆಲ್ಲರದು" ಎಂದು ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಪ್ರವೀಣ ರೈ, ಅಶೋಕ್ ನೆಕ್ರಾಜೆ, ಶ್ರೀಮತಿ ಲೀಲಾ ಮನೋಹರ್, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ, ಲೋಲಾಕ್ಷ ಕೈಕಂಬ, ದೇವಸ್ಥಾನದ ಇಂಜಿನಿಯರ್ ಉದಯಕುಮಾರ್, ಕೆ.ಡಿ.ಪಿ ಸದಸ್ಯ ಶಿವರಾಮ ರೈ ಹಾಗೂ ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಪ್ಲಾಸ್ಟಿಕ್ ಮುಕ್ತ ಕುಕ್ಕೆ – ಇದು ಕೇವಲ ಸರ್ಕಾರದ ಯೋಜನೆ ಅಲ್ಲ, ನಮ್ಮೆಲ್ಲರ ಹೃದಯದ ಹಂಬಲ. ಸ್ವಚ್ಛ ಕುಕ್ಕೆ, ಪವಿತ್ರ ಕುಕ್ಕೆಗಾಗಿ ಕೈಜೋಡಿಸೋಣ.
Post a Comment