ವಿಟ್ಲ, ಆಗಸ್ಟ್ 1: ವಿಟ್ಲ ಠಾಣಾ ಪೊಲೀಸರು ಬುಧವಾರ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ತಡೆ ಹಾಕುವ ಭರಪೂರ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿತ ಅಬ್ದುಲ್ ಸಮದ್ ಎಂಬಾತನು ಹೊಳೆಯೊಂದರಿಂದ ಯಂತ್ರದ ಸಹಾಯದಿಂದ ಮರಳನ್ನು ಅಕ್ರಮವಾಗಿ ತೆಗೆದು ಸಂಗ್ರಹಿಸುತ್ತಿರುವ ಮಾಹಿತಿ ಮೇರೆಗೆ, ವಿಟ್ಲ ಠಾಣೆಯ ಉಪ ನಿರೀಕ್ಷಕ ರತ್ನಕುಮಾರ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದರು.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ, ಕೇರಳ ಗಡಿಯಿಂದ ಅಂದಾಜು ಒಂದು ಕಿ.ಮೀ ದೂರದಲ್ಲಿರುವ ಕಟ್ಟತ್ತಿಲ ಸೇತುವೆ ಬಳಿಯಲ್ಲಿ ಸುಮಾರು 2 ರಿಂದ 3 ಪಿಕಪ್ ಮರಳು ಹಾಗೂ ಮರಳು ತೆಗೆಯಲು ಬಳಸುತ್ತಿದ್ದ ಯಂತ್ರ, ಕಬ್ಬಿಣದ ಜಾಲರಿ, ಪೈಬರ್ ಬುಟ್ಟಿಗಳು, ಕಬ್ಬಿಣದ ಹಾರೆ ಸೇರಿ ಇತರೆ ಸಾಕಷ್ಟು ಸಾಮಗ್ರಿಗಳು ಪತ್ತೆಯಾಗಿವೆ.
ಪೊಲೀಸರು ಸದರಿ ಸೊತ್ತುಗಳನ್ನು ಜಪ್ತಿ ಮಾಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರಕರಣವನ್ನು (ಅ.ಕ್ರ:93/2025) ದಾಖಲಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.
Post a Comment