ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸೇವಾ ದರ ಏರಿಕೆ – ಅಧ್ಯಕ್ಷರಿಂದ ಸ್ಪಷ್ಟನೆ

ಕುಕ್ಕೆ ಸುಬ್ರಹ್ಮಣ್ಯ;ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಲವು ಸೇವೆಗಳ ದರ ಏರಿಕೆಯ ಕುರಿತು ಸಾಮಾಜಿಕ ಮಾಧ್ಯಮ ಹಾಗೂ ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿರುವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಇದೊಂದು ಹೊಸ ನಿರ್ಧಾರವಲ್ಲ, ಹಿಂದೆ ಆಡಳಿತಾಧಿಕಾರಿಗಳ ಪ್ರಸ್ತಾವನೆಯ ಮೇರೆಗೆ ಅನುಷ್ಠಾನಗೊಂಡದ್ದು ಎಂದು ತಿಳಿಸಿದ್ದಾರೆ.




ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ
ಈಗಿನ ವ್ಯವಸ್ಥಾಪನ ಸಮಿತಿ ಅಧಿಕಾರಕ್ಕೆ ಬರುವ ಮೊದಲು ಪುತ್ತೂರು ಉಪ ವಿಭಾಗಾಧಿಕಾರಿಗಳು, ದೇವಸ್ಥಾನದ ಆಡಳಿತಾಧಿಕಾರಿಯಾಗಿ, ದರ ಪರಿಷ್ಕರಣೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದರು.

ಆ ಪ್ರಸ್ತಾವನೆಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸರ್ಕಾರದಿಂದ ಅನುಮೋದನೆ ದೊರೆತಿದ್ದು ಇದೀಗ ಅನುಷ್ಠಾನಕ್ಕೆ ಬಂದಿದೆ.

ಸುಮಾರು 10 ವರ್ಷಗಳಿಂದ ಸೇವೆಗಳ ದರಗಳಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಹಾಭಿಷೇಕ ಸೇರಿದಂತೆ ವಿವಿಧ ಸೇವೆಗಳಿಗೆ ಬಳಸುವ ಜೇನುತುಪ್ಪ, ತುಪ್ಪ, ತೆಂಗಿನಕಾಯಿ ಮುಂತಾದ ವಸ್ತುಗಳ ಬೆಲೆ ಏರಿಕೆಯಿಂದ ದೇವಸ್ಥಾನಕ್ಕೆ ಹೆಚ್ಚುವರಿ ವೆಚ್ಚವಾಗುತ್ತಿತ್ತು.


ಅಧ್ಯಕ್ಷರು ಸ್ಪಷ್ಟಪಡಿಸಿದ್ದು
“ಇದು ಯಾವುದೇ ಲಾಭ ಮಾಡುವ ಉದ್ದೇಶದಿಂದಲ್ಲ. ದೇವಸ್ಥಾನದಲ್ಲಿ ಕೆಲವು ಸೇವೆಗಳಿಗೆ ರಶೀದಿ ಹಣಕ್ಕಿಂತ ಹೆಚ್ಚು ಖರ್ಚು ಬರುತ್ತಿದ್ದ ಕಾರಣ, ಆ ವೆಚ್ಚವನ್ನು ಸಮತೋಲನಗೊಳಿಸುವ ಉದ್ದೇಶದಿಂದ ಮಾತ್ರ ದರ ಪರಿಷ್ಕರಣೆ ಮಾಡಲಾಗಿದೆ. ಉದಾಹರಣೆಗೆ, ಆಶ್ಲೇಷ ಬಲಿಯ ಸೇವೆಯನ್ನು ದೇವಸ್ಥಾನದಲ್ಲಿ 400 ರೂಪಾಯಿಗೆ ಮಾಡಿಕೊಡಲಾಗುತ್ತದೆ. ಇಷ್ಟು ಕಡಿಮೆ ದರದಲ್ಲಿ ಬೇರೆಡೆ ಈ ಸೇವೆ ಸಾಧ್ಯವಿಲ್ಲ. ಇಂಡಿವಿಜುವಲ್ ಆಗಿ ಮಾಡಿದರೆ ಐದಾರು ಸಾವಿರ ರೂಪಾಯಿ ಖರ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇವಲ ನೂರು ರೂಪಾಯಿ ಹೆಚ್ಚುವರಿಯನ್ನು ಮಾತ್ರ ಸೇರಿಸಲಾಗಿದೆ” ಎಂದು ಹೇಳಿದರು.

ಈ ಸಂದರ್ಭ ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ. ರಘು, ಅಜಿತ್ ಪಾಲೇರಿ, ಶ್ರೀಮತಿ ಪ್ರವೀಣ ರೈ, ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಲೀಲಾ ಮನೋಹರ್ ಹಾಗೂ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಕುಮಾರ್, ಸತೀಶ್ ಕೂಜುಗೋಡು ಉಪಸ್ಥಿತರಿದ್ದರು.

👉 ಈ ಸ್ಪಷ್ಟನೆಯ ಮೂಲಕ ದೇವಸ್ಥಾನದ ಸೇವಾ ದರ ಏರಿಕೆ ಕುರಿತಾದ ಗೊಂದಲಕ್ಕೆ ತೆರೆ ಬಿದ್ದಿದೆ.

Post a Comment

أحدث أقدم