ಕುಕ್ಕೆ ಸುಬ್ರಹ್ಮಣ್ಯ ಪಟ್ಟಣದ ವಾಹನ ಸಂಚಾರ ದಟ್ಟಣೆ ನಿವಾರಣೆಗಾಗಿ ಹಲವು ವರ್ಷಗಳಿಂದ ಬೇಡಿಕೆ ಇದ್ದ ಆರಂಪಾಡಿ–ಎಡ್ಡೊಳಿ ರಸ್ತೆ ಬೈಪಾಸ್ ಯೋಜನೆಗೆ ಇಂದು ಶ್ರಮದಾನದ ಮೂಲಕ ಚಾಲನೆ ದೊರಕಿದೆ.
ಸೆಪ್ಟೆಂಬರ್ 7ರಂದು ನಡೆದ ಈ ಶ್ರಮದಾನದಲ್ಲಿ ಆರಂಪಾಡಿ–ಎಡ್ಡೊಳಿ ರಸ್ತೆಯ ಕಳೆ ಕೀಳುವಿಕೆ, ಚರಂಡಿ ಶುದ್ಧೀಕರಣ, ಮಳೆಯಿಂದ ಹಾನಿಗೊಂಡ ಮಣ್ಣಿನ ರಸ್ತೆಯಲ್ಲಿರುವ ಕೊಂಡಗುಂಡಿಗಳನ್ನು ಮುಚ್ಚುವ ಕಾರ್ಯಗಳು ನೆರವೇರಿಸಲ್ಪಟ್ಟವು.
ಸುಮಾರು ಎರಡು ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಯೋಜನೆ ರೂಪಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಮಾರ್ಗವು ಕುಕ್ಕೆ ಸುಬ್ರಹ್ಮಣ್ಯ ಬೈಪಾಸ್ ಆಗಿ ರೂಪಾಂತರಗೊಳ್ಳಲಿದೆ. ಇದರಿಂದ ಜಾತ್ರೆ ಸಂದರ್ಭಗಳಲ್ಲಿ ಪಟ್ಟಣ ಮಧ್ಯಭಾಗದಲ್ಲಿ ಉಂಟಾಗುವ ವಾಹನ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರಾದ ಅಶೋಕ್ ನೇಕ್ರಾಜೆ, ಶ್ರೀಮತಿ ಪ್ರವೀಣ ರೈ, ಶ್ರೀಮತಿ ಸೌಮ್ಯ ಭರತ್, ಕಡಬ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಕುಮಾರ್, ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಕೆ.ಡಿ.ಪಿ ಸದಸ್ಯ ಶಿವರಾಮ ರೈ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಕಾರ್ಯದರ್ಶಿ ಮೋನಪ್ಪ ಮತ್ತಿತರರು ಉಪಸ್ಥಿತರಿದ್ದರು.
ಹಾಗೆಯೇ ಸುಬ್ರಹ್ಮಣ್ಯ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸುಮಾರು 150 ಮಂದಿ ವಿದ್ಯಾರ್ಥಿಗಳು, ಕಾರ್ಯಕ್ರಮ ಅಧಿಕಾರಿ ಸುಮಿತ್ರ, ಉಪನ್ಯಾಸಕಿ ಆರತಿ ಹಾಗೂ ಸ್ಥಳೀಯ ನಾಗರಿಕರು ಈ ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಈ ಹಂತದ ಕಾರ್ಯಾಚರಣೆಯೊಂದಿಗೆ ಬೈಪಾಸ್ ಮಾರ್ಗದ ಅಭಿವೃದ್ಧಿಗೆ ಪ್ರಾರಂಭವಾದದ್ದು ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿ ಪಥದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.
Post a Comment