ಸುಬ್ರಹ್ಮಣ್ಯ: ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಸತ್ಯನಾರಾಯಣ ಪೂಜೆ.

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಸೋಮವಾರ ಸತ್ಯನಾರಾಯಣ ಹಾಗೂ ಶಾರದಾ ಪೂಜೆ ವೈದಿಕ ರೀತಿಯಲ್ಲಿ ನೆರವೇರಿಸಲಾಯಿತು.

ಪುರೋಹಿತರು ಸಂಕಲ್ಪ ಸ್ವೀಕರಿಸಿ ವೈದಿಕ ವಿಧಾನಗಳಲ್ಲಿ ಪೂಜೆ ನೆರವೇರಿಸಿ ಸಮರ್ಪಣೆ ಸಲ್ಲಿಸಿದರು. ನಂತರ ದೇವತಾ ಪ್ರಾರ್ಥನೆ ಮಾಡಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಶಿಕ್ಷಕ–ರಕ್ಷಕ ಸಂಘದ ಸದಸ್ಯ ಗಣೇಶ್ ಪರ್ವತಮುಖಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಜನೆ ನೆರವೇರಿಸಿದರು. ಬಳಿಕ ಹುಲಿವೇಷ ಕುಣಿತ ವಿಶೇಷ ಆಕರ್ಷಣೆಯಾಗಿತ್ತು. ಬಾಳೆಯ ದಿಂಡಿನಿಂದ ಸೃಷ್ಟಿಸಲಾದ ಗುಡಿಯು ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪ್ರಾಚಾರ್ಯ ಸೋಮಶೇಖರ್ ನಾಯಕ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಂದಾ ಹರೀಶ್, ಹಿರಿಯ ಸಹಶಿಕ್ಷಕ ಎಂ. ಕೃಷ್ಣ ಭಟ್, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್, ಸ್ಟಾಫ್ ಸೆಕ್ರೆಟರಿ ಗಿರೀಶ್, ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಉಪಾಧ್ಯಕ್ಷ ಗುಣವರ್ಧನ ಕೆದಿಲ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

أحدث أقدم