ಉಡುಪಿ ಪೇಜಾವರ ಮಠಾಧೀಶ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ 60 ವರ್ಷಗಳು ತುಂಬಿರುವ ನೆನಪಿಗಾಗಿ, ಬದುಕಿನ ಸಮಗ್ರ ಚಿತ್ರಣ ಹೊಂದಿರುವ ಮೊಟ್ಟಮೊದಲ ಬೃಹತ್ ಕೃತಿ ಸಂತ ಬದುಕಿನ ಶಬ್ದ ಶಿಲ್ಪ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವೃಂದಾವನಸ್ಥ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರನೆಯ ಆರಾಧನೆಯ ಸಂದರ್ಭದಲ್ಲಿ ತಾರೀಕು 22ನೆಯ ಸೋಮವಾರ ಬಿಡುಗಡೆಗೊಳ್ಳಲಿದೆ.
ಪೂಜ್ಯರ ಸರ್ವತೋಮುಖ ಸಾಧನೆಗಳ ಲೇಖನಗಳು ಹಾಗೂ ಬಣ್ಣದ ಸುಂದರ ಭಾವಚಿತ್ರಗಳನ್ನು ಹೊಂದಿರುವ ಈ ಕೃತಿಯನ್ನು ಪ್ರಸಿದ್ಧ ಲೇಖಕರಾದ ಟಿ ನಾರಾಯಣ ಭಟ್ ರಾಮಕುಂಜ ಬರೆದಿರುವರು. ಹಲವಾರು ಮಕ್ಕಳ ಕೃತಿಗಳು, ದಕ್ಷಿಣ ಭಾರತದ ನೂರಾರು ಸಾಧಕರ ಕಿರು ವ್ಯಕ್ತಿ ಚಿತ್ರಣ, ವಿಶ್ವೇಶ ತೀರ್ಥರ ಕುರಿತ ಏಳು ಕೃತಿಗಳು, ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಮೋದಿಗೆ ಮೋದಿಯೇ ಸಾಟಿ ಮುಂತಾದ ಸುಮಾರು 50ರಷ್ಟು ಜನಪ್ರಿಯ ಕೃತಿಗಳನ್ನು ಬರೆದು ಸಾಹಿತ್ಯ ಲೋಕದಲ್ಲಿ ಹಿರಿಯ ಕಿರಿಯ ರಾದಿಯಾಗಿ ಎಲ್ಲರ ಮೆಚ್ಚುಗೆ ಪಡೆದ ಶ್ರೀಯುತರ ಸಾಹಿತ್ಯ ಸರಸ್ವತಿಯ ಉಪಾಸನೆ ಇಲ್ಲಿ ಅನಾವರಣಗೊಂಡಿದೆ.
ವಿದ್ಯಾಪೀಠದ ನೂರಾರು ವಿದ್ವಾಂಸರ ಸಮ್ಮುಖದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಪೂಜ್ಯ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಶ್ರೀ ಮಾಧವ ತೀರ್ಥ ಸಂಸ್ಥಾನ ಶ್ರೀ ತಂಬಿಹಳ್ಳಿ ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥ ಶ್ರೀಪಾದರು ಉಪಸ್ಥಿತರಿರುವರು. ಬೆಳ್ತಂಗಡಿಯ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಎ ಕೃಷ್ಣಪ್ಪ ಪೂಜಾರಿ ಕೃತಿಯನ್ನು ಪರಿಚಯಿಸಲಿದ್ದು ಟಿ ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಲಿರುವರು ಎಂದು ವಿದ್ಯಾಪೀಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
إرسال تعليق