ಕಡಬ:ಕಡಬ ತಾಲ್ಲೂಕು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯನ್ನು ನಿಯಮಾನುಸಾರ ಪ್ರತಿ ಮೂರು ತಿಂಗಳಿಗೊಮ್ಮೆ ಕರೆಯಬೇಕಿದ್ದರೂ, ಕಳೆದ ಐದು ತಿಂಗಳು ಕಳೆದರೂ ಸಭೆ ನಡೆಸಲಾಗಿಲ್ಲ ಎಂದು ಕೆಡಿಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕೆಡಿಪಿ ಕಡಬ ತಾಲ್ಲೂಕಿನ ಸದಸ್ಯರಾದ ಶಿವರಾಮ್ ರೈ, ಅಶ್ರಫ್ ಸೇಡಿಗುಂಡಿ, ಉಷಾ ಸೇರಿದಂತೆ ಇತರ ಸದಸ್ಯರು ಕಡಬ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ, ಕರ್ನಾಟಕ ಸರ್ಕಾರದ ಅಭಿವೃದ್ಧಿ ಉದ್ದೇಶದೊಂದಿಗೆ ರಚಿಸಲಾದ ಕೆಡಿಪಿ ಸಮಿತಿಯ ನಿಯಮಾವಳಿಯನ್ನು ಉಲ್ಲಂಘಿಸಿ ಸಭೆ ನಡೆಸದಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದೆಂಬ ಉದ್ದೇಶದಿಂದ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿಲ್ಲವೋ ಎಂಬ ಅನುಮಾನವೂ ವ್ಯಕ್ತಪಡಿಸಲಾಗಿದೆ.
ಇದಕ್ಕೆ ಕೆಲವು ಅಧಿಕಾರಿಗಳು ಸಹ ಕೈಜೋಡಿಸಿರುವ ಮಾಹಿತಿ ದೊರೆತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಕೆಡಿಪಿ ಸಭೆಗೆ ದಿನಾಂಕ ನಿಗದಿಪಡಿಸಿ, ಒಂದು ವಾರದೊಳಗೆ ಸಭೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಲ್ಲದೆ, ಕೆಡಿಪಿ ಸಭೆಗೆ ಭೂ ಅಭಿವೃದ್ಧಿ ಬ್ಯಾಂಕಿನ ಕಾರ್ಯದರ್ಶಿಗಳು ಮಾತ್ರ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ.
ಒಂದು ವಾರದೊಳಗೆ ಸಭೆ ನಡೆಸುವ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ, ಕಡಬ ತಾಲ್ಲೂಕು ಪಂಚಾಯತ್ ಎದುರು ಸಾರ್ವಜನಿಕರನ್ನು ಸೇರಿಸಿಕೊಂಡು ಕಾನೂನುಬದ್ಧ ಹೋರಾಟ ನಡೆಸಲಾಗುವುದು ಎಂದು ಕೆಡಿಪಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
إرسال تعليق