ಕಾರ್ತಿಕೇಯನ ಕ್ಷೇತ್ರಕ್ಕೆ ಕಾವಲಾಗಿದ್ದ ನಿಷ್ಠಾವಂತ ಪೊಲೀಸ್ ಅಧಿಕಾರಿ – ಕಾರ್ತಿಕ್ ಎಸ್ಐಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಆತ್ಮೀಯ ಬೀಳ್ಕೊಡುಗೆ.

ಕುಕ್ಕೆ ಸುಬ್ರಹ್ಮಣ್ಯ:ಯಾವುದೇ ಊರಿನಲ್ಲಾದರೂ ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳ ನಡುವೆ ಉತ್ತಮ ಸಂಬಂಧ ಇರುವುದು ಆ ಪ್ರದೇಶದ ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಅಗತ್ಯ. ಸಾರ್ವಜನಿಕರಿಗೆ ಸತ್ಯ ಹಾಗೂ ನಿಖರ ಮಾಹಿತಿ ತಲುಪಿಸುವ ಕಾರ್ಯದಲ್ಲಿ ಪೊಲೀಸರು ಮತ್ತು ಮಾಧ್ಯಮಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುತ್ತವೆ. ಈ ನಿಟ್ಟಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೂ ಪೊಲೀಸ್–ಮಾಧ್ಯಮ ಸಂಬಂಧ ಸದಾ ಸೌಹಾರ್ದಯುತವಾಗಿದ್ದು, ಅದಕ್ಕೆ ಕಾರಣರಾದ ಅಧಿಕಾರಿಗಳಲ್ಲಿ ಕಾರ್ತಿಕ್ ಎಸ್ಐ ಪ್ರಮುಖರಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕಾರ್ತಿಕ್ ಅವರು ಇದೀಗ ಮಂಗಳೂರಿಗೆ ವರ್ಗಾವಣೆಯಾಗಿ ತೆರಳುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಅವರು ನಿಷ್ಠಾವಂತ, ಜನಸ್ನೇಹಿ ಹಾಗೂ ಕಾನೂನು ಅರಿವಿನಿಂದ ಕೂಡಿದ ಅಧಿಕಾರಿಯಾಗಿ ಜನಮಾನಸದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ.
ಕಾರ್ತಿಕ್ ಎಸ್ಐ ಅವರು ಯಾವುದೇ ಪ್ರಕರಣ ಬಂದರೂ ಅದನ್ನು ಆಳವಾಗಿ ಪರಿಶೀಲಿಸಿ, ಕಾನೂನಿನ ಚೌಕಟ್ಟಿನಲ್ಲಿಯೇ ನ್ಯಾಯಯುತವಾಗಿ ನಿಭಾಯಿಸುವ ಅಪೂರ್ವ ಸಾಮರ್ಥ್ಯ ಹೊಂದಿದ್ದರು. ಅವರ ಬಳಿ ಬಂದ ಪ್ರಕರಣಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಈ ಬಗ್ಗೆ ನಾವು ಹೇಳುವುದಕ್ಕಿಂತ, ಸುಬ್ರಹ್ಮಣ್ಯದ ಜನಸಾಮಾನ್ಯರೇ ಅವರ ಕಾರ್ಯಶೈಲಿಯನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರೆಲ್ಲರೂ ಕಾರ್ತಿಕ್ ಎಸ್ಐ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಸಮಯದಲ್ಲಾದರೂ ಯಾರದ್ದೇ ಫೋನ್ ಕರೆ ಬಂದರೂ ತಕ್ಷಣ ಸ್ಪಂದಿಸುವ ಗುಣ, ಅಧಿಕಾರದ ಅಹಂಕಾರವಿಲ್ಲದೆ ಎಲ್ಲರೊಂದಿಗೆ ಸ್ನೇಹಪೂರ್ಣವಾಗಿ ಮಾತನಾಡುವ ನಡವಳಿಕೆ – ಇವೆಲ್ಲವು ಅವರಿಗೆ “ಜನಸ್ನೇಹಿ ಪೊಲೀಸ್ ಅಧಿಕಾರಿ” ಎಂಬ ಹೆಸರನ್ನು ತಂದುಕೊಟ್ಟಿವೆ. ಜನಸ್ನೇಹಿ ಪೊಲೀಸ್ ಎನ್ನುವುದಕ್ಕೆ ಕಾರ್ತಿಕ್ ಸರ್ ಸೂಕ್ತ ಉದಾಹರಣೆ ಎಂದು ಹೇಳಬಹುದು.
ಇನ್ನೂ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕೆಲವು ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿಯೂ ಕಾರ್ತಿಕ್ ಎಸ್ಐ ಅವರ ಪಾತ್ರ ಗಮನಾರ್ಹವಾಗಿದೆ. ವಾಹನ ದಟ್ಟಣೆ ನಿಯಂತ್ರಣದ ನಿಟ್ಟಿನಲ್ಲಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಕೀರ್ತಿ ಅವರಿಗೇ ಸಲ್ಲುತ್ತದೆ. ಅನೇಕ ಕಳ್ಳತನ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ ಉದಾಹರಣೆಗಳೂ ಸಾಕಷ್ಟಿವೆ.
ಇತ್ತೀಚೆಗೆ ಹರಿಹರ ಹಾಗೂ ಕೊಲ್ಲಮೊಗರು ಭಾಗದಲ್ಲಿ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಯುವಕರೊಂದಿಗೆ ಮಾತನಾಡಿದ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದಾಗ, ಕಾರ್ತಿಕ್ ಎಸ್ಐ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಪ್ರಕರಣವನ್ನು ಪತ್ತೆಹಚ್ಚಿ ಗೊಂದಲವನ್ನು ನಿವಾರಣೆ ಮಾಡಿದರು. ಇದರಿಂದ ಜನರಲ್ಲಿ ನಂಬಿಕೆ ಮತ್ತು ಭದ್ರತೆಯ ಭಾವನೆ ಮತ್ತಷ್ಟು ಬಲವಾಯಿತು.
ಕುಕ್ಕೆ ಸುಬ್ರಹ್ಮಣ್ಯದ ನದಿಗಳಿಗೆ ಒಳಚರಂಡಿ ನೀರು ಹರಿಯುವ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೂಡ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಪರಿಸರ ಸಂರಕ್ಷಣೆಯಲ್ಲಿಯೂ ಅವರ ಜವಾಬ್ದಾರಿಯುತ ನಿಲುವು ಶ್ಲಾಘನೀಯವಾಗಿದೆ.
2024–25ರಲ್ಲಿ ಆಗಿನ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಅವರು ಸುಬ್ರಹ್ಮಣ್ಯ ಆಡಳಿತಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಡೆದ ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಸಂಪೂರ್ಣ ಭದ್ರತೆಯ ಜವಾಬ್ದಾರಿಯನ್ನು ಕಾರ್ತಿಕ್ ಎಸ್ಐ ಹಾಗೂ ಅವರ ತಂಡ ಯಶಸ್ವಿಯಾಗಿ ನಿರ್ವಹಿಸಿತ್ತು. ಲಕ್ಷಾಂತರ ಭಕ್ತರು ಸೇರಿದ್ದ ಆ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ, ಕಳ್ಳತನ ಅಥವಾ ಕಪ್ಪು ಚುಕ್ಕೆ ಮೂಡದಂತೆ ನೋಡಿಕೊಂಡಿದ್ದು ಇಂದಿಗೂ ಎಲ್ಲರ ನೆನಪಿನಲ್ಲಿ ಉಳಿದಿದೆ.
ಕಾರ್ತಿಕ್ ಅವರು ಉತ್ತಮ ಗುಣ, ಮಾನವೀಯತೆ ಮತ್ತು ದೃಢ ನಿಲುವುಳ್ಳ ವ್ಯಕ್ತಿ. ಯಾವುದೇ ಒತ್ತಡಕ್ಕೆ ಮಣಿಯದೆ, ತಮ್ಮ ಅಧಿಕಾರ ಹಾಗೂ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕಾನೂನಾತ್ಮಕವಾಗಿ ನಿರ್ವಹಿಸಿದ ಅಧಿಕಾರಿಯಾಗಿದ್ದಾರೆ. ಇಂತಹ ನಿಷ್ಠಾವಂತ ಅಧಿಕಾರಿಯನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಿಂದ ಬೀಳ್ಕೊಡುತ್ತಿರುವುದು ಸ್ಥಳೀಯರಿಗೆ ನಿಜಕ್ಕೂ ನೋವಿನ ವಿಷಯವಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ಜನತೆ ಕಾರ್ತಿಕ್ ಎಸ್ಐ ಅವರಿಗೆ ಅವರ ಮುಂದಿನ ಸೇವಾ ಹಾದಿಗೆ ಹಾರೈಕೆಗಳನ್ನು ಸಲ್ಲಿಸುತ್ತಿದ್ದು, ಅವರು ಎಲ್ಲೆ ಇದ್ದರೂ ಇಂತಹವೇ ಪ್ರಾಮಾಣಿಕ ಸೇವೆ ಮುಂದುವರಿಸಲಿ ಎಂಬ ಶುಭಾಶಯ ವ್ಯಕ್ತಪಡಿಸುತ್ತಿದ್ದಾರೆ.

Post a Comment

أحدث أقدم