ಸುಬ್ರಹ್ಮಣ್ಯ:ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ವಿಳಂಬವಾಗುತ್ತಿರುವುದು ಹಾಗೂ ಧಾರ್ಮಿಕ-ಶೈಕ್ಷಣಿಕ ಕಾರ್ಯಗಳಲ್ಲಿ ಗಂಭೀರ ಲೋಪಗಳಾಗುತ್ತಿರುವುದನ್ನು ಖಂಡಿಸಿ ಹಿಂದೂ ರಕ್ಷಣಾ ವೇದಿಕೆ ಕಡಬ ಮತ್ತು ಸುಳ್ಯ ತಾಲೂಕು ದಕ್ಷಿಣ ಕನ್ನಡ ಘಟಕವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾಗಿರುವ ಅಧಿಕಾರಿಗಳು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಜನವರಿ,08, ರಂದು
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಗೆ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಕ್ಕೊತಾಯ ಮನವಿ ಸಲ್ಲಿಸಿದ್ದಾರೆ.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಯ ಕಡತ ಸರಕಾರದ ಕಾರ್ಯದರ್ಶಿಗಳ ಕಚೇರಿಯಲ್ಲಿ ಸ್ಥಗಿತಗೊಂಡಿರುವುದು, ದೇವಸ್ಥಾನದ ಧಾರ್ಮಿಕ ಕಾರ್ಯಗಳಲ್ಲಿ ದಿಟ್ಟಂ ಬದಲಾವಣೆ, ಕ್ಷೇತ್ರದ ಅಧೀನದಲ್ಲಿರುವ ಕಾಲೇಜಿನ ಉಪನ್ಯಾಸಕರ ವೇತನ ಪಾವತಿಯಲ್ಲಿ ವಿಳಂಬ, ಹಾಗೂ ಆಡಳಿತ ಮಂಡಳಿ ನಿರ್ಣಯಿಸಿದ ಸಣ್ಣ-ಪುಟ್ಟ ಕೆಲಸಗಳನ್ನು ತುರ್ತಾಗಿ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ದೇವರ ಭಕ್ತರಾಗಿ ಪ್ರಶ್ನಿಸುವುದು ನಮ್ಮ ಕರ್ತವ್ಯ ಎಂದು ವೇದಿಕೆ ತಿಳಿಸಿದೆ.
ಈ ಕುರಿತು ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಧಾರ್ಮಿಕ ದತ್ತಿ ಸಚಿವರನ್ನು ನೇರವಾಗಿ ಭೇಟಿ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸುತ್ತೇವೆ ಎಂದು ತಿಳಿಸಲಾಗಿದೆ.
ಹಿಂದೂ ರಕ್ಷಣಾ ವೇದಿಕೆಯ ಪ್ರಮುಖ ಆಗ್ರಹಗಳು:
ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಯ ಕಡತವನ್ನು ತುರ್ತಾಗಿ ಕ್ಯಾಬಿನೆಟ್‌ಗೆ ರವಾನಿಸುವುದು
ದೇವಸ್ಥಾನಕ್ಕೆ ಆರ್ಥಿಕ ನಷ್ಟ ಉಂಟುಮಾಡುತ್ತಿರುವ ಪೂಜೆಗಳ ಬದಲಾವಣೆ ಕುರಿತು ಕ್ರಮ
ದೇವಳದ ಅಧೀನದ ಕಾಲೇಜಿನ ಉಪನ್ಯಾಸಕರ ವೇತನ ಪಾವತಿ
ವಿದ್ಯಾರ್ಥಿಗಳ ಬಳಕೆಗೆ ಬಸ್ ವ್ಯವಸ್ಥೆ ಹಾಗೂ ಹಾಸ್ಟೆಲ್ ಕಾಮಗಾರಿಗಳ ಆರಂಭ
ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಸಮಸ್ಯೆ ಪರಿಹಾರ
ದೇವಳದಿಂದ ನಿರ್ವಹಿಸಲ್ಪಡುವ ಒಳಚರಂಡಿ ಯೋಜನೆಗೆ ಜರಡಿ ಅಳವಡಿಕೆ ಮತ್ತು ಧರ ನಿಗದಿ
ಇಂಜಾಡಿಯಲ್ಲಿ ದೇವಳದ ಜಾಗದಲ್ಲಿ ದೇವಳಕ್ಕೆ ನಷ್ಟವಾಗುವ ರೀತಿಯಲ್ಲಿ ಮಣ್ಣು ಹಾಕಿರುವ ಕುರಿತು ತನಿಖೆ
ದೇವಳದ ಪೂರ್ವ ಬಾಗಿಲಿನ ರಸ್ತೆ ಮತ್ತು ಸೇತುವೆ ಸಮಸ್ಯೆಗಳ ಪರಿಹಾರ
ಬಿರದ್ವಾರದಲ್ಲಿ ಗೇಟ್ ತೆರೆಯದೆ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟಾಗಿರುವ ವಿಚಾರಕ್ಕೆ ಕ್ರಮ
ಈ ಎಲ್ಲ ವಿಷಯಗಳಲ್ಲಿ ತಕ್ಷಣ ಸ್ಪಷ್ಟ ಉತ್ತರ ಹಾಗೂ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹಿಂದೂ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
إرسال تعليق