ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆ ಕೊರಗಜ್ಜ ದೈವಸ್ಥಾನದಲ್ಲಿ ಜನವರಿ 26ರ ರಾತ್ರಿ ಏಳು ಗಂಟೆಗೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರ ಹಿತೈಷಿಗಳ ಬಳಗದಿಂದ ಕೊರಗಜ್ಜ ದೈವಕ್ಕೆ ವಿಶೇಷ ಕೋಲ ಸೇವೆ ಭಕ್ತಿಭಾವದಿಂದ ಜರಗಿತು.
ಸುಮಾರು 15 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯ ಸೇವೆ ಸಲ್ಲಿಸಿರುವ ಹರೀಶ್ ಇಂಜಾಡಿ ಅವರು, ಗ್ರಾಮ ಪಂಚಾಯತ್ ಸದಸ್ಯರಾಗಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅರಣ್ಯ ಸಮಿತಿ ಅಧ್ಯಕ್ಷರಾಗಿ ಹಲವು ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡು ಬಂದಿದ್ದಾರೆ. ಅವರ ಸೇವಾ ಮನೋಭಾವ ಮತ್ತು ಸಮಾಜಮುಖಿ ಕಾರ್ಯಗಳನ್ನು ಗಮನಿಸಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾಗಿ ನೇಮಕವಾಗಬೇಕೆಂಬ ಹರಕೆಯನ್ನು ಹಿತೈಷಿ ಬಳಗವು ಈ ಹಿಂದೆ ಕೊರಗಜ್ಜ ದೈವದ ಬಳಿ ಬೇಡಿಕೊಂಡಿದ್ದರು.
ಹರಕೆ ಪೂರೈಸಿದ ಹಿನ್ನೆಲೆಯಲ್ಲಿ, ಕೊರಗಜ್ಜ ದೈವಕ್ಕೆ ಕೃತಜ್ಞತೆಯ ಸೂಚಕವಾಗಿ ಜನವರಿ 26ರಂದು ವಿಶೇಷ ಕೋಲ ಸೇವೆಯನ್ನು ಅರ್ಪಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹರೀಶ್ ಇಂಜಾಡಿ ಅವರ ನೂರಾರು ಸಂಖ್ಯೆಯ ಹಿತೈಷಿಗಳು, ಭಕ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡು, ಕೊರಗಜ್ಜ ದೈವಕ್ಕೆ ವಿಶೇಷ ಸೇವೆ ಸಲ್ಲಿಸಿ ಧಾರ್ಮಿಕ ಶ್ರದ್ಧೆಯನ್ನು ವ್ಯಕ್ತಪಡಿಸಿದರು.
ಸಂಪೂರ್ಣ ಕಾರ್ಯಕ್ರಮ ಭಕ್ತಿ, ಶಾಂತಿ ಹಾಗೂ ಧಾರ್ಮಿಕ ಸಂಭ್ರಮದ ವಾತಾವರಣದಲ್ಲಿ ನೆರವೇರಿತು.
إرسال تعليق