ಪಾಣೆಮಂಗಳೂರು ಬಳಿಯಲ್ಲಿ ಗಾಂಜಾ ಸಾಗಾಟ – ಇಬ್ಬರ ಬಂಧನ.

ಬಂಟ್ವಾಳ ಅ. 8:ಬಂಟ್ವಾಳ ನಗರ ಪೊಲೀಸ್ ಠಾಣೆಯ ಪಿ.ಎಸ್‌.ಐ ಸಂದೀಪ್ ಕುಮಾರ ಶೆಟ್ಟಿ (ಕಾ&ಸು) ನೇತೃತ್ವದ ತಂಡವು ನಡೆಸಿದ ತಪಾಸಣೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಒಟ್ಟು 8.790 ಕಿಲೋಗ್ರಾಂ ಗಾಂಜಾ ಹಾಗೂ ಬೈಕ್‌ ವಶಪಡಿಸಿಕೊಂಡಿದೆ.

ಮಂಗಳವಾರ ಬೆಳಿಗ್ಗೆ ಸುಮಾರು 11.50 ಗಂಟೆಗೆ ಪಾಣೆಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಹೆಲ್ಮೆಟ್ ಧರಿಸದೇ ಬಂದು ನಿಲ್ಲಿಸಲು ಸೂಚನೆ ನೀಡಿದಾಗ, ಇಬ್ಬರು ಬೈಕ್ ಸವಾರರು ಓಡಿಹೋದರು. ಪೊಲೀಸರು ಅವರನ್ನು ಕೈಕುಂಜೆ ರೈಲ್ವೇ ಸ್ಟೇಷನ್ ಹತ್ತಿರ ಸುತ್ತುವರಿದು ಹಿಡಿದರು. ವಿಚಾರಣೆ ನಡೆಸಿದಾಗ, ಸವಾರ ಅಬ್ದುಲ್ ಮಜೀದ್ ಮತ್ತು ಸಹಸವಾರ ಅಬ್ದುಲ್ ಸಾಧಿಕ್ ಎನ್ನುವವರು 25-09-2025 ರಂದು ಮಾಧಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡರು.

ಅವರು ಅಬಕಾರಿ ಇಲಾಖೆಯವರು ಬೆನ್ನಟ್ಟಿದಾಗ ಬೊಲೇರೋ ಪಿಕಪ್ ವಾಹನವನ್ನು ಬಿಟ್ಟು ನಂದಾವರ ರೈಲ್ವೇ ಬಳಿ ಪರಾರಿಯಾಗಿದ್ದು, ಗಾಂಜಾವನ್ನು ಮಜೀದ್ ಅವರ ಮನೆಯಲ್ಲಿ ಇಟ್ಟಿದ್ದರು. ಅದನ್ನು ಬಳಿಕ ಮಂಗಳೂರು ಕಡೆಗೆ ಮಾರಾಟ ಮಾಡಲು ಕೊಂಡು ಹೋಗುತ್ತಿದ್ದಾಗ ಬಂಧನಕ್ಕೊಳಗಾದರು.

ಪೊಲೀಸರು 5 ಪ್ಲಾಸ್ಟಿಕ್‌ ಪ್ಯಾಕೆಟ್‌ಗಳಲ್ಲಿ ಒಟ್ಟು 8.790 ಕಿಲೋಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 88,700/-) ಮತ್ತು KA-19-HK-9534 ಸಂಖ್ಯೆಯ ಬೈಕ್ (ಮೌಲ್ಯ ರೂ. 1,00,000/-) ಸೇರಿದಂತೆ ಒಟ್ಟು ರೂ. 2,17,460/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. ನಂ: 116/2025 ಅಡಿ NDPS ಕಾಯ್ದೆಯ ಸೆಕ್ಷನ್ 8(c), 20(b)(ii)(B) ಹಾಗೂ BNS ಕಲಂ 3(5) ರಂತೆ ಪ್ರಕರಣ ದಾಖಲಾಗಿದೆ. ಬಂಧಿತ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

أحدث أقدم