ಕುಕ್ಕೆ ಸುಬ್ರಹ್ಮಣ್ಯ, ಅ.10:ಧರ್ಮಸ್ಥಳದ ಸೌಜನ್ಯ ಭೀಕರ ಹತ್ಯೆ ಪ್ರಕರಣಕ್ಕೆ ಇಂದು ಸುಮಾರು 13 ವರ್ಷ ಕಳೆದರೂ ಇನ್ನೂ ನ್ಯಾಯ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸೌಜನ್ಯ ಪರ ಹೋರಾಟಗಾರರು ಹಾಗೂ ಅಭಿಮಾನಿಗಳು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾವಪೂರ್ಣ ಪ್ರಾರ್ಥನೆ ಸಲ್ಲಿಸಿದರು.
ಕುಕ್ಕೆ ಸುಬ್ರಹ್ಮಣ್ಯ ರಥ ಬೀದಿಯಲ್ಲಿ ಸೌಜನ್ಯ ಅವರ ಭಾವಚಿತ್ರವನ್ನು ಇರಿಸಿ, ದೀಪ ಹಚ್ಚಿ, ಹೂವಿನ ಅಲಂಕಾರ ಮಾಡಲಾಯಿತು. ನಂತರ ಭಕ್ತಿಭಾವದಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು, “ಸೌಜನ್ಯ ಅವರಿಗೆ ನ್ಯಾಯ ದೊರೆಯಲಿ” ಎಂಬ ಆಶಯದಿಂದ ಪ್ರಾರ್ಥನೆ ಸಲ್ಲಿಸಲಾಯಿತು.
ಭಾರತದಲ್ಲಿ ನಿರ್ಭಯ, ಉನ್ನಾವ, ಜೆಸ್ಸಿ ಕಾಲ್ ಮುಂತಾದ ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ದೊರೆತಿದ್ದರೂ, ಸೌಜನ್ಯ ಪ್ರಕರಣದಲ್ಲಿ ಇನ್ನೂ ನ್ಯಾಯ ದೊರೆಯದಿರುವುದಕ್ಕೆ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಡಾ. ರವಿಕಕ್ಕೆ ಪದವು ಮಾತನಾಡಿ, “ಸೌಜನ್ಯ ಅವರನ್ನು ಹೀನಾಯವಾಗಿ ಹತ್ಯೆ ಮಾಡಿದವರಿಗೆ ದೇವರೇ ಶಿಕ್ಷೆ ನೀಡಲಿ. ಅವನು ಮಾಡಿದ ಪಾಪವನ್ನು ತಾನೇ ಒಪ್ಪಿಕೊಳ್ಳುವ ದಿನ ಬರುವಂತಾಗಲಿ” ಎಂದು ಭಾವಪೂರ್ಣವಾಗಿ ಹೇಳಿದರು.
ನಿವೃತ್ತ ಯೋಧ ಸುಬ್ರಹ್ಮಣ್ಯ ಅವರು ಮಾತನಾಡಿ, “13 ವರ್ಷವಾದರೂ ನ್ಯಾಯ ದೊರೆಯದಿರುವುದು ತುಂಬಾ ದುಃಖಕರ. ಒಂದು ಮುಗ್ಧ ಹೆಣ್ಣುಮಗಳಿಗೆ ನ್ಯಾಯ ಕೊಡಲಿಕ್ಕೆ ಆಗದೆ ನಾವು ಮುಖ ಎತ್ತಿಕೊಂಡು ಓಡಾಡುತ್ತಿದ್ದೇವೆ. ನಿರ್ಭಯ ಪ್ರಕರಣಕ್ಕೆ ಆರು ವರ್ಷಗಳಲ್ಲಿ ನ್ಯಾಯ ಸಿಕ್ಕಿತು. ಆದರೆ ನಮ್ಮ ತಂಗಿ ಸೌಜನ್ಯ ಅವರಿಗೆ ಯಾಕೆ ಸಿಕ್ಕಿಲ್ಲ? ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆಯೇ? ನ್ಯಾಯ ದೇವತೆಯ ಕಣ್ಣು ಯಾರೋ ಕಟ್ಟಿ ಹಾಕಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರರು ಮುಂದುವರೆದು, “ನ್ಯಾಯ ಸಿಗಬೇಕಾದ್ದು ಸಂವಿಧಾನದ ಹಕ್ಕು. ನಾವು ಸಂವಿಧಾನವನ್ನು ನಂಬುವ ಸಾಂವಿಧಾನಿಕ ಹೋರಾಟ ಮುಂದುವರಿಸುತ್ತೇವೆ. ಒಳ್ಳೆಯ ನ್ಯಾಯವಾದಿಗಳನ್ನು ನೇಮಿಸಿ, ಸುಪ್ರೀಂ ಕೋರ್ಟ್ ಮುಖಾಂತರ ನ್ಯಾಯ ಪಡೆಯುತ್ತೇವೆ” ಎಂದು ನುಡಿದರು.
ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಸದಸ್ಯರು ಹಾಗೂ ಸೌಜನ್ಯ ಪರ ಹೋರಾಟಗಾರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಹೋರಾಟಗಾರರು “ಸೌಜನ್ಯನಿಗೆ ಜೈ” ಎಂದು ಘೋಷಣೆ ಕೂಗಿ ಭಾವಪೂರ್ಣವಾಗಿ ಪ್ರಾರ್ಥನೆ ಸಲ್ಲಿಸಿದರು.
إرسال تعليق