ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಭೆ — ರೈತರ ಹಕ್ಕು ರಕ್ಷಣೆಗೆ ಹಲವು ನಿರ್ಣಯಗಳು

ಸುಬ್ರಹ್ಮಣ್ಯ: ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಅಕ್ಟೋಬರ್ 9 ರಂದು ಸುಬ್ರಹ್ಮಣ್ಯ ಐನೆಕಿದು ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ರೈತರ ಹಕ್ಕುಗಳು ಮತ್ತು ಅರಣ್ಯ ಇಲಾಖೆಯ ತೊಂದರೆಗಳ ಕುರಿತು ಸಭೆ ನಡೆಯಿತು.

ವೇದಿಕೆಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರೈತರ ಕೃಷಿ ಭೂಮಿಯ ಹಕ್ಕು ಹಾಗೂ ಅರಣ್ಯ ಇಲಾಖೆ ಕ್ರಮಗಳಿಂದ ಉಂಟಾಗುತ್ತಿರುವ ತೊಂದರೆಗಳನ್ನು ಪ್ರಮುಖ ಅಜೆಂಡಾ ಆಗಿ ಚರ್ಚಿಸಲಾಯಿತು.

ಸಭೆಯಲ್ಲಿ ಜಯಪ್ರಕಾಶ್ ಕೂಜುಗೋಡು, ಆಶೋಕ್ ಮೂಲೆಮಜಲು, ರಮಾನಂದ ಎಣ್ಣೆಮಜಲು, ಈಶ್ವರ ಅರಂಪಾಡಿ ಸೇರಿದಂತೆ ಹಲವಾರು ರೈತರು ಮತ್ತು ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಭೆಯಲ್ಲಿ ಕೆಳಗಿನ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು:

ಪಶ್ಚಿಮ ಘಟ್ಟ ಮತ್ತು ಗ್ರಾಮೀಣ ಪ್ರದೇಶಗಳ ಗಡಿ ಗುರುತನ್ನು ಸ್ಪಷ್ಟವಾಗಿ ಮಾಡಬೇಕು.

ರೈತರ ಸ್ವಾದೀನದಲ್ಲಿರುವ ಮನೆ, ಕೃಷಿ ಹಾಗೂ ಇತರ ಭೂಮಿಗಳಿಗೆ ಹಕ್ಕುಪತ್ರ ನೀಡಬೇಕು.

ಕಾಡುಪ್ರಾಣಿಗಳ ಹಾನಿಯಿಂದ ಕೃಷಿಕರನ್ನು ಹಾಗೂ ಕೃಷಿಭೂಮಿಯನ್ನು ರಕ್ಷಿಸಲು ಕೋವಿ ಪರವಾನಿಗೆ ನೀಡಬೇಕು.

ಅರಣ್ಯ ವಿಸ್ತರಣೆ ಮಾಡುವ ಮೊದಲು ರೈತರ ಮೂಲಭೂತ ಸೌಕರ್ಯದ ಭೂಮಿಯನ್ನು ಕಾದಿರಿಸಿ, ನಂತರವೇ ಅರಣ್ಯ ಸಂರಕ್ಷಣಾ ಯೋಜನೆ ರೂಪಿಸಬೇಕು.

ಅರಣ್ಯ ಇಲಾಖೆಗೆ ಬರುವ ಪರಿಸರ ಸಂರಕ್ಷಣೆಯ ಹಾಗೂ ಅಭಿವೃದ್ಧಿ ಅನುದಾನವನ್ನು ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳ ಮೂಲಕ ಅನುಷ್ಠಾನಗೊಳಿಸಬೇಕು.

ಜಾಗಗಳ ಜಂಟಿ ಸರ್ವೆ ನಡೆಸಿ ಭಾಗಶಃ ಅರಣ್ಯಕ್ಕೆ ಒಳಪಡುವ ಸಮಸ್ಯೆಗಳನ್ನು ಬಗೆಹರಿಸಿ, ಪ್ಲಾಟಿಂಗ್ ಆಗದ ಜಾಗಗಳನ್ನು ಪ್ಲಾಟಿಂಗ್ ಮಾಡಿಸಬೇಕು.

ಇದಲ್ಲದೆ, ಸುಳ್ಯ, ಕಡಬ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಹಕ್ಕೊತ್ತಾಯ ಸಭೆಗಳನ್ನು ಆಯೋಜಿಸಲು ನಿರ್ಧರಿಸಲಾಯಿತು. ಈ ಸಭೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಾಗಿ ರೈತರ ಮನವಿಯನ್ನು ಸ್ವೀಕರಿಸಬೇಕೆಂದು ವೇದಿಕೆ ಒತ್ತಾಯಿಸಿದೆ. ಅಧಿಕಾರಿಗಳ ಸ್ಪಂದನೆ ದೊರೆಯದಿದ್ದರೆ ಪ್ರತಿಭಟನೆ ಮುಂದುವರೆಸುವ ನಿರ್ಣಯವೂ ಕೈಗೊಳ್ಳಲಾಗಿದೆ.

Post a Comment

أحدث أقدم