ಮಾಧ್ವಮತ ತತ್ವ ಪ್ರತಿಪಾದನಾಚಾರ್ಯ ಶ್ರೀಮನ್ಮಧ್ವಾಚಾರ್ಯರ ಪುಣ್ಯಪಾದ ಸ್ಪರ್ಶಿಸಿದ ಪುಣ್ಯಕ್ಷೇತ್ರ ರಾಮಕುಂಜದ ಈರಕೀ ಮಠ. ಸುಮಾರು 8 ಶತಮಾನಗಳಿಂದ ಮಠದ ಸಂಪ್ರದಾಯಗಳನ್ನು ಎತ್ತಿ ಹಿಡಿದು, ಭಕ್ತ ಜನರಿಗೆ ಒಳಿತು ಬಯಸಿ ಸೇವೆ ಸಲ್ಲಿಸುತ್ತಿರುವವರು ನೂರಿತ್ತಾಯ ಕುಟುಂಬಸ್ಥರು. ಈರಕೀಮಠ ದಿ| ಕೇಶವ ಉಪಾಧ್ಯಾಯರು, ಶತಾಯುಷಿ ದಿ| ವೆಂಕಟ್ರಮಣ ಉಪಾಧ್ಯಾಯರು, ತನ್ನ ಸಹೋದರರ ಒಡಗೂಡಿ ಮುನ್ನಡೆಸುತ್ತಿರುವ ನರಹರಿ ಉಪಾಧ್ಯಾಯರು ಇವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಮುಂದಿನ ತಲೆಮಾರಿನ ನಂಬಿಕಸ್ಥ ಯುವಕ ಅನಿರುದ್ಧ ಉಪಾಧ್ಯಾಯರು, ತಮ್ಮ ಬದುಕನ್ನೇ ಮಠಕ್ಕಾಗಿ ಅರ್ಪಿಸಿದ ಮನೆಯ ಗೃಹಿಣಿಯರು, ಮಕ್ಕಳು, ಕುಟುಂಬಸ್ಥರು ಮಠದ ಸೇವೆಗಾಗಿ ಸಲ್ಲಿಸಿದ ಅವಿರತ ಶ್ರಮವನ್ನು ಕಂಡವರು ನಾವು. ಉಡುಪಿಯ ಅಷ್ಟಮಠಗಳಿಗೂ ಈರಕೀ ಮಠಕ್ಕೂ ಅವಿನಾಭಾವ ನಂಟು ಬಹು ಕಾಲದ್ದು. ಈರಕೀಮಠ ಸಮಾಜಕ್ಕಾಗಿ ಸಲ್ಲಿಸುತ್ತಿರುವ ನಿರಂತರ ಸೇವೆಯನ್ನು ಗುರುತಿಸಿ ಉಡುಪಿಯ ರಾಜಾಂಗಣದಲ್ಲಿ ನರಹರಿ ಉಪಾಧ್ಯಾಯ ದಂಪತಿಗಳನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಗೌರವದ ಕೃಷ್ಣಾನುಗ್ರಹ ಪ್ರಶಸ್ತಿಯನ್ನಿತ್ತು ಸನ್ಮಾನಿಸಿರುವುದು ಮಠದ ಭಕ್ತರಾದ ನಮಗೆಲ್ಲ ತುಂಬು ಸಂತಸ ನೀಡಿದೆ. ಮಠದ ಆರಾಧ್ಯ ದೇವರುಗಳು ಕುಟುಂಬಕ್ಕೆ ಇನ್ನಷ್ಟು ಶಕ್ತಿ ನೀಡಿ ಸಮಾಜಕ್ಕೆ ಮಾರ್ಗದರ್ಶನ ನೀಡುವಂತೆ ಅನುಗ್ರಹಿಸಲಿ. ಮಠದ ಸತ್ಪರಂಪರೆ ಸದಾ ಬೆಳಗಲಿ.
*ಟಿ ನಾರಾಯಣ ಭಟ್ ರಾಮಕುಂಜ*.
Post a Comment