ಕಡಬ: ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿಗಳು ಮತ್ತು ಸಿಬಂದಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಜನರು ಯಾವುದೇ ರೀತಿಯ ಭಯ ಪಡಬೇಕಿಲ್ಲ. ಸಾರ್ವಜನಿಕರು ಜಾಗೃತರಾದರೆ ಮಾತ್ರ ಭ್ರಷ್ಟಾಚಾರ ನಿಗ್ರಹ ಸಾಧ್ಯ ಎಂದು ಮಂಗಳೂರು ಲೋಕಾಯುಕ್ತ ವಿಭಾಗದ ಎಸ್‌ಪಿ ಕುಮಾರಚಂದ್ರ ಹೇಳಿದರು.
ಬುಧವಾರ ಕಡಬ ತಾಲೂಕು ಆಡಳಿತ ಸೌಧದಲ್ಲಿ ನಡೆದ ಕಡಬ ತಾಲೂಕುಮಟ್ಟದ ಲೋಕಾಯುಕ್ತ ಜನಸಂಪರ್ಕ ಸಭೆೆಯಲ್ಲಿ ಮಾತನಾಡಿದರು. ಮುಂದೆ ತಮ್ಮ ಕೆಲಸಕಾರ್ಯಗಳಿಗೆ ತೊಂದರೆ ನೀಡಬಹುದು ಎನ್ನುವ ಭಯದಿಂದಾಗಿ ಸಾರ್ವಜನಿಕರು ಲಂಚಕೋರ ಅಧಿಕಾರಿಗಳ ವಿರುದ್ಧ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಆ ರೀತಿ ಭಯಪಡಬೇಕಿಲ್ಲ. ಸಾರ್ವಜನಿಕರ ಯಾವುದೇ ಕಾನೂನು ಬದ್ಧವಾದ ಕೆಲಸವನ್ನು ಮಾಡಿಕೊಡುವುದು ಸರಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳ ಕರ್ತವ್ಯವಾಗಿದೆ. ಜನರನ್ನು ವಿನಾ ಕಾರಣ ಅಲೆದಾಡಿಸಿ ಹಣಕ್ಕಾಗಿ ಪೀಡಿಸಿದರೆ ಅಂತಹವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಗಳನ್ನು ಭರ್ತಿ ಮಾಡಿ ಅಫಿದಾವಿತ್ ಮಾಡಿ ಸಲ್ಲಿಸಬೇಕು. ದೂರುದಾರರಿಗೆ ಅಧಿಕಾರಿಗಳು ಕಿರುಕುಳ ನೀಡದಂತೆ ರಕ್ಷಣೆ ನೀಡಲಾಗುವುದು ಎಂದರು. ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಲು ನಿರಾಸಕ್ತಿ ತೋರುತ್ತಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಲೋಕಾಯುಕ್ತ ಸಂಸ್ಥೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಗ್ರಾಮ ಸಭೆಗಳಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಹಾಗೂ ಇತರ ಅಧಿಕಾರಿಗಳು ದೂರು ಅರ್ಜಿಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿ ನೀಡಿದರು. ಲೋಕಾಯುಕ್ತ ಡಿವೈಎಸ್ಪಿ ಡಾ|ಗಾನಾ ಪಿ.ಕುಮಾರ್, ಇನ್ಸ್ಪೆಕ್ಟರ್ ಚಂದ್ರಶೇಖರ್ ಕೆ.ಎನ್., ಸಿಬಂದಿಗಳಾದ ಮಹೇಶ್, ಶರತ್ ಸಿಂಗ್, ಸುರೇಂದ್ರ, ವಿನಾಯಕ್, ರುದ್ರೇಗೌಡ ಉಪಸ್ಥಿತರಿದ್ದರು.
ದೂರು ಸಲ್ಲಿಸಲು ಜನರ ನಿರಾಸಕ್ತಿ;ಕೇವಲ 7 ದೂರು ಅರ್ಜಿ ಸಲ್ಲಿಕೆ:
42 ಗ್ರಾಮಗಳ ವ್ಯಾಪ್ತಿಯ ಕಡಬ ತಾಲೂಕು ಮಟ್ಟದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರೂ ಸಾರ್ವಜನಿಕರು ಭಾಗವಹಿಸಿದ್ದು ಕೇವಲ ಬೆರಳೆಣಿಕೆಷ್ಟು ಜನರು ಮಾತ್ರ. ದೂರು ಅರ್ಜಿ ಸಲ್ಲಿಕೆಯಾಗಿರುವುದು ಕೇವಲ 7 ಮಾತ್ರ. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ, ಕೆಲಸಗಳನ್ನು ಮಾಡಿಕೊಡದೆ ಸಾರ್ವಜನಿಕರನ್ನು ಸತಾಯಿಸುವುದು ಮುಂತಾದ ವಿಚಾರಗಳ ಬಗ್ಗೆ ಆರೋಪಿಸುವ ಸಾರ್ವಜನಿಕರು ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಮಟ್ಟದ ಲೋಕಾಯುಕ್ತ ಅಧಿಕಾರಿಗಳು ಸ್ವತ: ಬಂದು ಅಹವಾಲುಗಳನ್ನು ಸಲ್ಲಿಸುವಂತೆ ಕೇಳಿಕೊಂಡರೂ ದೂರು ನೀಡಲು ಹಿಂದೇಟು ಹಾಕುತ್ತಿರುವುದು ಕಂಡುಬಂತು.
Post a Comment