ಉಡುಪಿ ಜಿಲ್ಲೆಯ ಪರಣಂಕಿಲದಲ್ಲಿ ಏಪ್ರಿಲ್ 9ರಿಂದ 13ರವರೆಗೆ ಭಕ್ತಿ, ಜ್ಞಾನ ಹಾಗೂ ಅಧ್ಯಾತ್ಮದ ಮಹಾ ಉತ್ಸವ "ಭಕ್ತಿ ಸಿದ್ಧಾಂತೋತ್ಸವ - ಶ್ರೀಮದ್ ಬ್ರಹ್ಮಸೂತ್ರ ಅನುವ್ಯಾಖ್ಯಾನ ಸುಧಾಮಂಗಳೋತ್ಸವ ಹಾಗೂ ದಶಕೋಟಿ ರಾಮ ತಾರಕ ಮಂತ್ರ ಜಪ ಅಭಿಯಾನ" ಜರುಗಲಿದ್ದು, ಇದರ ಭಾಗವಾಗಿ ಭಕ್ತಿ ರಥಯಾತ್ರೆ ಕರ್ನಾಟಕದೆಲ್ಲೆಡೆ ಸಂಚರಿಸುತ್ತಿದೆ.
ಈ ಧಾರ್ಮಿಕ ಯಾತ್ರೆ ಇಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದು, ಅದ್ದೂರಿ ಸ್ವಾಗತಕ್ಕೆ ಸಾಕ್ಷಿಯಾಯಿತು. ರಥದ ಆಗಮನದ ವೇಳೆ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಆಡಳಿತಾಧಿಕಾರಿ ಶ್ರೀ ಸುದರ್ಶನ್ ಜೋಯಿಸ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತಗುಂಡಿ, ದೇವಸ್ಥಾನದ ಹಾಗೂ ಮಠದ ಆಡಳಿತ ಮಂಡಳಿ, ಮತ್ತು ಭಕ್ತಾದಿಗಳು ಭಕ್ತಿ ರಥಯಾತ್ರೆಗೆ ಅಪೂರ್ವವಾಗಿ ಅತಿಥ್ಯ ಸಲ್ಲಿಸಿದರು.
ಪೂಜಾ ವಿಧಿ ಮತ್ತು ಮಂಗಳಾರತಿ:
ರಥಯಾತ್ರೆ ಪುಣ್ಯಭೂಮಿಗೆ ಆಗಮಿಸಿದ ಕ್ಷಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರು ಭಕ್ತಿ ರಥಕ್ಕೆ ಮಂಗಳಾರತಿ ಸಲ್ಲಿಸಿದರು. ತೆಂಗಿನಕಾಯಿ ಒಡೆದು ವಿಶೇಷ ಪೂಜೆ ನಡೆಸಿದರು.
ಭಕ್ತಿ ಸಿದ್ಧಾಂತೋತ್ಸವದ ವೈಭವ
ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಮಹಾ ಉತ್ಸವವನ್ನು ಸಂಕಲ್ಪಿಸಿದ್ದು, ಅನೇಕ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ವಿದ್ಯಾರ್ಥಿಗಳ ಘಟಿಕೋತ್ಸವ: ಗುರುಕುಲ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಶಾಸ್ತ್ರೋಕ್ತ ಪದವಿ ಪ್ರದಾನ
ಪಾಠ ಮತ್ತು ಪಾರಾಯಣ: ಚತುರ್ವೇದ, ಭಾಗವತ, ರಾಮಾಯಣ, ಮಹಾಭಾರತ ಮತ್ತು ಸರ್ವಮೂಲ ಪಾರಾಯಣ
ವಿದ್ವತ್ ಗೋಷ್ಠಿಗಳು: ಭಾರತೀಯ ತತ್ವಶಾಸ್ತ್ರ, ಸಂಪ್ರದಾಯ ಹಾಗೂ ವೇದಾಂತರ ಚಿಂತನಕ್ಕೆ 30 ವಿದ್ವಾಂಸರು ಸಂಯೋಜಿತ ಚರ್ಚೆ
ಹರಿನಾಮ ಸಂಕೀರ್ತನೆ: 2500ಕ್ಕೂ ಹೆಚ್ಚು ಭಜನಾ ಮಂಡಳಿಗಳಿಂದ ಭಕ್ತಿ ಸಂಗೀತ
ಪವಿತ್ರ ಯಾಗಗಳು: ಮಹಾಮೃತ್ಯುಂಜಯ ಯಾಗ, ದಶಕೋಟಿ ರಾಮ ತಾರಕ ಮಂತ್ರ ಯಾಗ, ಕೋಟಿವಿಷ್ಣು ಸಹಸ್ರನಾಮ ಪಾರಾಯಣ
ಸಾಮೂಹಿಕ ಮಂತ್ರಜಪ: 50,000ಕ್ಕೂ ಅಧಿಕ ಭಕ್ತರಿಂದ ದಶಕೋಟಿ ರಾಮ ತಾರಕ ಮಂತ್ರ ಜಪ
ಅನ್ನಸಂತರ್ಪಣೆ: ಸಾವಿರಾರು ಭಕ್ತರಿಗೆ ಪ್ರಸಾದ ವಿತರಣಾ
ಸಾಂಸ್ಕೃತಿಕ ಕಾರ್ಯಕ್ರಮಗಳು: ಪ್ರತಿದಿನ ಪ್ರಸಿದ್ಧ ಕಲಾವಿದರಿಂದ ಧಾರ್ಮಿಕ ಸಂಗೀತ ಮತ್ತು ನೃತ್ಯ
ಗೋಸಂರಕ್ಷಣೆ ಹಾಗೂ ಯಾಗ: ಗೋವುಗಳ ರಕ್ಷಣೆಗೆ ಗೋಸೂಕ್ತಯಾಗ, ಧಾರ್ಮಿಕ ಪ್ರಚಾರಕ್ಕಾಗಿ ಪಾಠಶಾಲೆ ವಿದ್ಯಾರ್ಥಿಗಳಿಗೆ ವೇದ ಪಾಠ
ಸಾಧಕರ ಗೌರವ: ಧಾರ್ಮಿಕ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಹಾಗೂ ಸನ್ಮಾನ
ಧರ್ಮಸಭೆ: ಗಣ್ಯ ಮಹನೀಯರ ಉಪನ್ಯಾಸಗಳು, ಹಿಂದೂ ಪರಂಪರೆಯ ಸಮಾವೇಶ
ಈ ವಿಶಿಷ್ಟ ಉತ್ಸವದಲ್ಲಿ ಸಮಸ್ತ ಭಕ್ತಾದಿಗಳು ಕುಟುಂಬ ಸಮೇತ ಆಗಮಿಸಿ, ಧರ್ಮಾನುಷ್ಠಾನದಲ್ಲಿ ಪಾಲ್ಗೊಳ್ಳಲು ಹಾಗೂ ಪಾರಮಾರ್ಥಿಕ ಅನುಗ್ರಹವನ್ನು ಪಡೆಯಲು ಪೇಜಾವರ ಮಠದ ಆಡಳಿತ ಮಂಡಳಿ ಅಹ್ವಾನಿಸಿದೆ.
Post a Comment