ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಶ್ರೀರಾಮನವಮಿ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವವು ಪೂರ್ವಶಿಷ್ಠ ಸಂಪ್ರದಾಯದಂತೆ ಭಕ್ತಿಭಾವಪೂರ್ವಕವಾಗಿ ಆಚರಿಸಲಾಯಿತು. ಆದಿತ್ಯವಾರ ಸಂಜೆ ದೇವಳದಿಂದ ಕಾಶಿಕಟ್ಟೆ ಮಹಾ ಗಣಪತಿ ಸನ್ನಿಧಾನದವರೆಗೆ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.

ಆ ಬಳಿಕ ಕಾಶಿಕಟ್ಟೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಆಶ್ಲೇಷ ವಸತಿ ಗೃಹದ ಮುಂಭಾಗದಲ್ಲಿರುವ ಬಂಡಿವಾಳ ಕಟ್ಟೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಕಟ್ಟೆಪೂಜೆ ನೆರವೇರಿತು. ಈ ಶ್ರದ್ಧಾಯುತ ಪೂಜಾ ವಿಧಿಯನ್ನು ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ನೆರವೇರಿಸಿದರು.

ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ದೇವರನ್ನು ಶ್ರೀ ದೇವಳಕ್ಕೆ ಹಿಂದಿರುಗಿಸುವ ಸಂದರ್ಭ ಭಕ್ತರು ಆರತಿ ನೀಡಿದ್ದು, ಹಣ್ಣು-ಕಾಯಿ ಸಮರ್ಪಿಸಿದರು.
ಈ ಮೊದಲು ದೇವಳದ ಆಂಜನೇಯ ಸನ್ನಿಧಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿಯವರು ಉಪಸ್ಥಿತರಿದ್ದರು.

Post a Comment

أحدث أقدم