ನೂತನ ಅಧ್ಯಕ್ಷ ಹರೀಶ್ ಇಂಜಾಡಿ ಅವರಿಗೆ ರವಿ ಕಕ್ಕೇ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನ – ಶುದ್ಧ ಹೃದಯದ ಸೇವೆಗೈಯುವ ನಾಯಕನಿಗೆ ಗೌರವ.

ಕುಕ್ಕೆ ಸುಬ್ರಹ್ಮಣ್ಯ, ಮೇ 25:
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿಮಾನಿ, ಸೇವೆಗೈಯುವ ಶ್ರದ್ಧಾವಂತರಲ್ಲಿ ಒಬ್ಬರಾದ ಹರೀಶ್ ಇಂಜಾಡಿ ಅವರು ದೇವಾಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದನ್ನು ಗೌರವಿಸುವ ಸಲುವಾಗಿ, ರವಿ ಕಕ್ಕೇ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾವಪೂರ್ಣ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಟ್ರಸ್ಟ್‌ನ ಸ್ಥಾಪಕ ಡಾ. ರವಿ ಕಕ್ಕೇಪದವು ಅವರು ಶಾಲು ಹೊದಿಸಿ, ಫಲಪುಷ್ಪಗಳೊಂದಿಗೆ ಅವರ ಅಧ್ಯಕ್ಷರಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದ ವೇಳೆ ಮಾತನಾಡಿದ ಡಾ. ರವಿ, “ಹರೀಶಣ್ಣ ನಮ್ಮಲ್ಲಿ ಮನೆಮಗನಂತೆ. ಸುಬ್ರಹ್ಮಣ್ಯದ ಸಣ್ಣ-ದೊಡ್ಡ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ, ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ವ್ಯಕ್ತಿ. ಅವರ ಸಾಮಾನ್ಯ ಬದುಕು, ಸರಳತೆಯ ಜೀವನ ಶೈಲಿ, ಯಾವುದೇ ಬಡವನು ಸಹಾಯ ಕೇಳಿದಾಗ ತಕ್ಷಣ ಸ್ಪಂದಿಸುವ ಅವರ ಮನಸ್ಸು ಎಲ್ಲರಿಗೂ ಪರಿಚಿತ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಕಾಸದ ಹಾದಿಯಲ್ಲಿ ನಿಂತ ನಾಯಕ:

ಹರೀಶ್ ಇಂಜಾಡಿ ಅವರು ಗ್ರಾಮ ಪಂಚಾಯತ್ ಸದಸ್ಯರಾಗಿ ಬಹುಕಾಲದಿಂದ ಕೆಲಸ ಮಾಡುತ್ತಿರುವಲ್ಲಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉತ್ತಮ ರಸ್ತೆ, ವಿದ್ಯುತ್, ನೀರಿನ ಪೂರೈಕೆ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಾರೆ. ದೇವಾಲಯಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಶೌಚಾಲಯ ಸೌಲಭ್ಯ, ಸಂಚಾರ ವ್ಯವಸ್ಥೆ, ಸುರಕ್ಷತೆ, ಹಾಗೂ ಶುದ್ದತೆಯ ಕಡೆ ವಿಶೇಷ ಗಮನ ಹರಿಸಿದ್ದಾರೆ.
ಅವರ ಸಂಯಮಿತ ನಾಯಕತ್ವದ ಶೈಲಿ, ನಿರ್ಧಾರಗಳಲ್ಲಿ ನಿಷ್ಠೆ, ಸಾರ್ವಜನಿಕರ ಅಭಿಪ್ರಾಯಕ್ಕೆ ಪ್ರಾಮುಖ್ಯತೆ ನೀಡುವ ವೈಶಿಷ್ಟ್ಯ, ಹಾಗೂ ಭದ್ರತೆಯ ದೃಷ್ಟಿಕೋನದಿಂದ ನಿರ್ವಹಣಾ ಶಕ್ತಿ ಅವರ ಮುಂದಿನ ಸೇವಾ ಅವಧಿಯಲ್ಲಿ ಮಹತ್ವದ ಪಾತ್ರವಹಿಸಲಿದೆ.
ಆರೋಪಗಳ ಹಿಂದೆ ದುರುದ್ದೇಶ:

ಇತ್ತೀಚೆಗೆ ಹರೀಶ್ ಇಂಜಾಡಿ ವಿರುದ್ಧ ಕೆಲವು ವ್ಯಕ್ತಿಗಳಿಂದ ಮಾಡಲ್ಪಟ್ಟ ಆರೋಪಗಳು ಖಂಡಿತವಾಗಿಯೂ ರಾಜಕೀಯ ಅಥವಾ ವೈಯಕ್ತಿಕ ದ್ವೇಷದಿಂದ ಪ್ರೇರಿತವಾದವು ಎಂಬುದು ಸ್ಪಷ್ಟವಾಗಿದೆ. ಡಾ. ರವಿ ಕಕ್ಕೇಪದವು ಈ ಕುರಿತು ಸ್ಪಷ್ಟವಾಗಿ ಹೇಳಿದಂತೆ – “ಒಬ್ಬ ವ್ಯಕ್ತಿಯ ಮೇಲಿರುವ ಆರೋಪಗಳನ್ನು ಸುಮ್ಮನೆ ನಂಬಿ ಅವನನ್ನು ಅಪಮಾನಪಡಿಸುವ ಮನೋಭಾವ ತಪ್ಪು. ನ್ಯಾಯಾಂಗ ವ್ಯವಸ್ಥೆ ಇದೆ, ನ್ಯಾಯ ಯಾವತ್ತೂ ಸತ್ಯದ ಪರವಾಗಿರುತ್ತದೆ. ಯಾರ ಮೇಲಾದರೂ ಆರೋಪ ಮಾಡುವ ಮುನ್ನ, ಅವರ ಸತ್ಪ್ರವೃತ್ತಿಯನ್ನೂ ನೋಡಬೇಕು. ಹರೀಶಣ್ಣ ಅವರ ಜನಸೇವೆ, ಸಮರ್ಪಿತ ಮನೋಭಾವ ಎಲ್ಲರಿಗೂ ಗೊತ್ತಿರುವ ವಿಷಯ.”

ಸೇವಾ ಟ್ರಸ್ಟ್‌ನ ಅಭಿವೃದ್ಧಿ ಮನವಿ:

ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ನೂತನ ಅಧ್ಯಕ್ಷರ ಗಮನಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ತರಲಾಯಿತು:

24 ಗಂಟೆಗಳ ವೈದ್ಯಕೀಯ ಸೇವೆ ನೀಡುವಹಾಗೆ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ,
ದೇವಾಲಯ ಆಡಳಿತದ ವಿದ್ಯಾಸಂಸ್ಥೆಗಳ ಉತ್ತಮೀಕರಣ,
ಕುಮಾರಧಾರ ಸ್ನಾನಘಟ್ಟದಲ್ಲಿ ಮಹಿಳೆಯರಿಗಾಗಿ ಬಟ್ಟೆ ಬದಲಾವಣೆ ವ್ಯವಸ್ಥೆ,
ಅಶ್ಲೇಷ ಬಲಿಗೆ ಸಭಾಭವನ, ಸುಬ್ರಹ್ಮಣ್ಯ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ,
ದೇವಾಲಯ ಸುತ್ತುಪೌಳಿಯ ಅಭಿವೃದ್ಧಿ ಮತ್ತು ಇತರ ಮೂಲಸೌಕರ್ಯಗಳ ಸುಧಾರಣೆ.

ಈ ಎಲ್ಲ ಮುನ್ನೋಟಗಳಿಂದ, ಶ್ರೀ ಹರೀಶ್ ಇಂಜಾಡಿ ಅವರು ಸಮಾಜ ಮತ್ತು ದೇವಾಲಯದ ಅಭಿವೃದ್ದಿಗೆ ಸ್ಪಷ್ಟ ದೃಷ್ಟಿಕೋನ ಹೊಂದಿರುವ ನಿಖರ ನಾಯಕ ಎಂಬುದು ಸಾಬೀತಾಗಿದೆ. ಅವರು ತನ್ನ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ, ಸಮಾಜದ ಅಪೇಕ್ಷೆಗಳನ್ನು ನಿಭಾಯಿಸುತ್ತಾರೆ ಎಂಬ ವಿಶ್ವಾಸ  ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷರ ಮಾತು; 

“ನಿಮ್ಮ ವಿಶ್ವಾಸಕ್ಕೆ ಮಾತುಗಳು ಸಾಲುತ್ತಿಲ್ಲ” – ನೂತನ ಅಧ್ಯಕ್ಷ ಹರೀಶ್ ಇಂಜಾಡಿ ಭಾವನಾತ್ಮಕ ಪ್ರತಿಕ್ರಿಯೆನೀಡಿದರು.
"ನಿಮ್ಮ ಪ್ರೀತಿ ಮತ್ತು ವಿಶ್ವಾಸಕ್ಕೆ ನನ್ನಲ್ಲಿ ಮಾತುಗಳು ಸಾಲುತ್ತಿಲ್ಲ. ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ದಶಕಗಳಿಂದ ಬಡವರ ಮನೆ ನಿರ್ಮಾಣ, ವೈದ್ಯಕೀಯ ಧನಸಹಾಯ, ಆರೋಗ್ಯ ತೊಂದರೆಗೊಳಗಾದವರಿಗೆ ಚಿಕಿತ್ಸೆಗಾಗಿ ನೆರವು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ನಿರಂತರ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಮಾಜಸೇವೆ ಕಾರ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನವರು ನನ್ನನ್ನು ಪ್ರೀತಿಯಿಂದ ಬರಮಾಡಿ ಗೌರವಿಸಿದ್ದು ನನಗೆ ತುಂಬಾ ಸಂತೋಷ ತಂದಿದೆ.

ಟ್ರಸ್ಟ್ ತನ್ನ ಮನವಿಯಲ್ಲಿ ವ್ಯಕ್ತ ಪಡಿಸಿರುವಂತೆ, ಸುಬ್ರಹ್ಮಣ್ಯದಲ್ಲಿ ಎಲ್ಲಾ ಕೆಲಸ ಕಾರ್ಯಗಳು ನಡೆಯಬೇಕು. ಆಶ್ಲೇಷ ಬಲಿ ಸಭಾ ಮಂಟಪ, ದೇವಾಲಯದ ಆಡಳಿತದಲ್ಲಿರುವ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟು ಮತ್ತು ಹೆಚ್ಚಿನ ಉತ್ತೇಜನ ದೊರಕಬೇಕು ಎಂಬುದು ಟ್ರಸ್ಟ್ ಆಶಯ. ಈ ನಿಟ್ಟಿನಲ್ಲಿ ನಾನು ಅಧಿಕಾರ ಸ್ವೀಕರಿಸಿದ ದಿನದಿಂದಲೇ ಕಾರ್ಯಪ್ರವೃತ್ತನಾಗಿದ್ದೇನೆ.
ಕುಕ್ಕೆ ಸುಬ್ರಹ್ಮಣ್ಯ ದೇವರೇ ನನಗೆ ಈ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೆ, ಮೂರು ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸು ಎಂದು ದೇವರು ಅನುಗ್ರಹಿಸಿದಂತೆ ನಾನು ನಂಬಿದ್ದೇನೆ. ನಾನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನದ 24 ಗಂಟೆ, ವರ್ಷದ 365 ದಿನವೂ ಲಭ್ಯವಿರುವ ಸ್ಥಳೀಯ ವ್ಯಕ್ತಿ. ಇಂತಹ ಹಿನ್ನೆಲೆಯುಳ್ಳವರಿಗೆ ಈ ಹಿಂದೆಯಿಲ್ಲದಂತ ಅಧ್ಯಕ್ಷ ಸ್ಥಾನ ಲಭಿಸಿರುವುದು ಅಪರೂಪ.
ನಾನು ಈ ಕ್ಷೇತ್ರದ ಮತ್ತು ದೇವಾಲಯದ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತೇನೆ. ಎಲ್ಲರೂ ನನ್ನ ಜೊತೆಗೆ ಸಹಕರಿಸಿ, ನಾವೆಲ್ಲರೂ ಒಟ್ಟಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಇನ್ನಷ್ಟು ಬೆಳೆಸೋಣ."ಎಂದರು.

ಕುಕ್ಕೆ ಶ್ರೀ ಕ್ಷೇತ್ರದ ರಥ ಕಟ್ಟುವ ಕಾರ್ಯ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಮಲೆಕುಡಿಯ ಸಮುದಾಯದಿಂದ  ಆಯ್ಕೆಯಾಗಿ ಬಂದಿರತಕ್ಕಂತ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಸೌಮ್ಯ ಅವರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಸೌಮ್ಯ, ರವಿಕಕ್ಕೆಪದವು ಟ್ರಸ್ಟ್‌ನ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಧಾರ್ಮಿಕ ಪ್ರಾಮುಖ್ಯತೆ ಹೊಂದಿದ ಸ್ಥಳೀಯರು ಭಾಗವಹಿಸಿದ್ದರು.

Post a Comment

أحدث أقدم