ಸುಬ್ರಹ್ಮಣ್ಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ನಾಪತ್ತೆಯಾದ ಯುವತಿ ಪತ್ತೆ, ಸಾರ್ವಜನಿಕರಿಂದ ಮೆಚ್ಚುಗೆ.
ಕುಕ್ಕೆ ಸುಬ್ರಹ್ಮಣ್ಯ, ಜೂನ್ 14: ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 12 ಜೂನ್ 2025ರಂದು ದಾಖಲಾಗಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಆಶ್ಚರ್ಯಕರ ತಿರುವು ಸಿಕ್ಕಿದ್ದು, ಕುಕ್ಕೆ ಸುಬ್ರಹ್ಮಣ್ಯದ ದೇವಳದ ಬಳಿ ಯುವತಿಯು ಇರುವ ಬಗ್ಗೆ ಮಾಹಿತಿ ಲಭಿಸುತ್ತಲೇ, ಸ್ಥಳೀಯ ಪೊಲೀಸರ ಶ್ರದ್ಧೆಯ ಕಾರ್ಯಾಚರಣೆ ಆರಂಭವಾಯಿತು.
ಈ ಕುರಿತು ಬೆಳ್ಳಂದೂರು ಠಾಣೆಯಿಂದ ಲಭ್ಯವಾದ ಮಾಹಿತಿಯನ್ನು ಆಧಾರವಾಗಿಸಿಕೊಂಡು, ಸುಬ್ರಹ್ಮಣ್ಯ ಪೊಲೀಸ್ ಉಪನಿರೀಕ್ಷಕರಾದ ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ, ಠಾಣಾ ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯಕ್ಕೆ ಮುಂದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಹುಡುಕಾಟ ನಡೆಸಿದರು. ದಿಟ್ಟ ಹಾಗೂ ಜವಾಬ್ದಾರಿಯುತ ಕಾರ್ಯದಿಂದಾಗಿ ಅವರು ದಿನಾಂಕ 13 ಜೂನ್‌ರಂದು ಯುವತಿಯನ್ನು ಪತ್ತೆಹಚ್ಚಿ, ಆಕೆಯನ್ನು ಸುರಕ್ಷಿತವಾಗಿ ಪಾಲಕರಿಗೆ ಹಸ್ತಾಂತರಿಸಿದರು.
ಈ ಪ್ರಕರಣವು ಅವರ ಠಾಣಾ ವ್ಯಾಪ್ತಿಗೆ ಸೇರಿದದ್ದು ಅಲ್ಲದಿದ್ದರೂ ಸಹ, ಸುಬ್ರಹ್ಮಣ್ಯ ಪೊಲೀಸರು ತಕ್ಷಣ ಸ್ಪಂದಿಸಿದ್ದು ಸಾರ್ವಜನಿಕ ಸೇವೆಯಲ್ಲಿ ನಿಷ್ಠೆಯು ಹೇಗಿರಬೇಕು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ. ಪ್ರಕರಣ ದಾಖಲಾಗಿದರಿಂದ ಕೇವಲ ಒಂದು ದಿನದಲ್ಲೇ ಯುವತಿಯನ್ನು ಪತ್ತೆಹಚ್ಚಿರುವುದು, ಪೊಲೀಸರು ಹೊಂದಿರುವ ಸಮಯ ಪ್ರಜ್ಞೆ, ಜವಾಬ್ದಾರಿ ಹಾಗೂ ಕರ್ತವ್ಯ ಬದ್ಧತೆಯ ಪ್ರತೀಕವಾಗಿದೆ.
ಸ್ಥಳೀಯ ನಾಗರಿಕರು ಹಾಗೂ ಯುವತಿಯ ಕುಟುಂಬದವರು ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಸಿಬ್ಬಂದಿಗೆ ಧನ್ಯವಾದಗಳು ಸಲ್ಲಿಸಿದ್ದಾರೆ. "ನಾವೆಲ್ಲಾ ಆತಂಕದಲ್ಲಿ ಇದ್ದಾಗ, ಪೊಲೀಸರು ನೀಡಿದ ಸಹಕಾರ ಮರೆಯಲಾಗದು" ಎಂದು ಕುಟುಂಬದವರು ಭಾವುಕರಾಗಿ ಹೇಳಿದರು.
ಈ ಘಟನೆಯು, ಪೊಲೀಸ್ ಇಲಾಖೆ ಮೇಲಿನ ಜನಸಾಮಾನ್ಯರ ನಂಬಿಕೆಯನ್ನು ಹೆಚ್ಚಿಸುವುದರ ಜೊತೆಗೆ, ಕರ್ತವ್ಯ ನಿರ್ವಹಣೆಯಲ್ಲಿನ ಔತ್ಸುಕ್ಯ, ಶ್ರದ್ಧೆ ಮತ್ತು ಸಮಾಜಮುಖಿ ನಿಲುವಿಗೆ ಸ್ಪಷ್ಟ ಸಾಕ್ಷಿಯಾಗಿದೆ.
ಇಂತಹ ಪ್ರಮಾಣದ ಪ್ರತಿಬದ್ಧತೆಯು ಇನ್ನು ಹೆಚ್ಚು ಅಧಿಕಾರಿಗಳಿಗೆ ಪ್ರೇರಣೆಯಾಗಿ, ಜನಸೇವೆಗಾಗಿ ಶ್ರಮಿಸುವ ನೈತಿಕ ಬಲವನ್ನು ನೀಡುತ್ತದೆ ಎಂಬುದು ನಮ್ಮ ಆಶಯ.
Post a Comment