ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸಂರಕ್ಷಣಾ ಸಮಿತಿಯ ಸಭೆ ಶುಕ್ರವಾರದಂದು ಸಮಿತಿಯ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆರವೇರಿತು.
ದೇವಸ್ಥಾನ ಸಂರಕ್ಷಣಾ ಸಮಿತಿಯ ಹಿಂದೆ ಅಧ್ಯಕ್ಷರಾಗಿದ್ದ ಸುಬ್ರಹ್ಮಣ್ಯ ಶಬರಾಯ ಅವರು ಇದೀಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆ, ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಅನಿವಾರ್ಯವಾಗಿತ್ತು.
ಈ ಹಿನ್ನೆಲೆ, ಸಮಿತಿಯ ಉಪಾಧ್ಯಕ್ಷರಾಗಿದ್ದ ಹಾಗೂ ದೇಗುಲದ ಅಭಿವೃದ್ಧಿಯಲ್ಲಿ ನಿರಂತರ ಶ್ರಮ ನೀಡುತ್ತಿರುವ ಪ್ರಶಾಂತ್ ರೈ ಅರಂತಬೈಲು ಗೋಳಿತೊಟ್ಟು ಅವರನ್ನು ಸರ್ವಾನುಮತದಿಂದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಅವರು ಹಿಂದೆ ದೇಗುಲದ ವ್ಯವಸ್ಥಾಪನಾ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದರೆನ್ನಲಾಗಿದೆ.
ಸಭೆಯಲ್ಲಿ ಮಾತನಾಡಿದ ಸದಸ್ಯರು, 20 ವರ್ಷಗಳ ಹಿಂದೆ ದೇವಸ್ಥಾನ ಬಳಕೆಗಾಗಿ ಖರೀದಿಸಲಾಗಿದ್ದ ಜಮೀನು ಖಾಸಗಿ ಟ್ರಸ್ಟ್ ಸ್ವಾಧೀನ ಮಾಡಿಕೊಂಡ ಹಿನ್ನೆಲೆಯಲ್ಲಿ, ಅದನ್ನು ದೇಗುಲದ ಹೆಸರಿಗೆ ಮರಳಿಸುವ ಹೋರಾಟದಲ್ಲಿ ಪ್ರಶಾಂತ್ ರೈ ಮುಂಚೂಣಿಯಲ್ಲಿ ನಿಂತಿದ್ದರು ಎಂಬುದನ್ನು ನೆನಪಿಸಿದರು.
ಸಮಿತಿಯು ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಶಬರಾಯ ಅವರನ್ನು ಗೌರವ ಸಲಹೆಗಾರರಾಗಿ ನೇಮಕ ಮಾಡಿತು. ಸಮಿತಿಯ ನೂತನ ಅಧ್ಯಕ್ಷರ ನೇಮಕಕ್ಕೆ ಭಕ್ತರು ಹಾಗೂ ಗ್ರಾಮಸ್ಥರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
Post a Comment