ಅಕ್ರಮ ಜಾನುವಾರು ಸಾಗಾಟ ಪತ್ತೆ – ಮಂಗಳೂರು ಪೊಲೀಸರ ಕಾರ್ಯಚಟುವಟಿಕೆ ಯಶಸ್ವಿ24 ಜಾನುವಾರುಗಳನ್ನು ರಕ್ಷಿಸಿ, ಆರೋಪಿಯ ಬಂಧನ

ಮಂಗಳೂರು, ಜೂನ್ 1:
ಕೇರಳದಿಂದ ಕರ್ನಾಟಕದತ್ತ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳ ಕಂಟೈನರ್ ವಾಹನವನ್ನು ಮಂಗಳೂರು ನಗರ ಪೊಲೀಸರು ತಲಪಾಡಿ ಟೋಲ್ ಗೇಟ್ ಬಳಿ ಪತ್ತೆ ಹಚ್ಚಿ, 24 ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರಿಗೆ ಲಭಿಸಿದ್ದ ಖಚಿತ ಮಾಹಿತಿಯ ಆಧಾರದಲ್ಲಿ, ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಅನೇಕ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿತ್ತು. ಈ ಕ್ರಮದ ಫಲವಾಗಿ, 2025ರ ಜೂನ್ 1ರ ಬೆಳಗ್ಗಿನ ಜಾವ, ತಲಪಾಡಿ ಟೋಲ್ ಬಳಿ ಪರಿಶೀಲನೆ ನಡೆಸಿದಾಗ ಸಂಶಯಾಸ್ಪದ ಕಂಟೈನರ್ ವಾಹನ ಪತ್ತೆಯಾಯಿತು. ಪರಿಶೀಲನೆಯ ವೇಳೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದುದು ಬಹಿರಂಗವಾಯಿತು.

ಪೊಲೀಸರು ವಾಹನವನ್ನು ವಶಕ್ಕೆ ತೆಗೆದುಕೊಂಡು, ಚಾಲಕನನ್ನು ಸ್ಥಳದಲ್ಲಿಯೇ ಬಂಧಿಸಿದ್ದಾರೆ. ಘಟನೆಯ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 82/2025 ರಂತೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೆೊಳ್ಳಲಾಗಿದೆ. ರಕ್ಷಿಸಲಾದ 24 ಜಾನುವಾರುಗಳನ್ನು ಸಮೀಪದ ಗೋಶಾಲೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರ ಪೊಲೀಸರ ಈ ಕಾರ್ಯಚಟುವಟಿಕೆ ಸಾರ್ವಜನಿಕರಲ್ಲಿ ಕಾನೂನು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.

Post a Comment

Previous Post Next Post