ಮಂಗಳೂರು, ಜೂನ್ 2: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಇಂದು (ಜೂನ್ 2) ಮಹತ್ವದ ಅಂತರ್ಜಿಲ್ಲಾ ಸಭೆ ನಡೆಯಿತು. ಈ ಸಭೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅವರು ಸಭೆಗೆ ನೇತೃತ್ವ ವಹಿಸಿದ್ದಾರು, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ, ಕಾಸರಗೋಡು ಜಿಲ್ಲಾ ಎಸ್‌ಪಿ ಹಾಗೂ ಎರಡೂ ಜಿಲ್ಲೆಗಳ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಭೆಯ ಉದ್ದೇಶ, ಗಡಿಭಾಗದ ಶಾಂತಿ, ಭದ್ರತೆ ಹಾಗೂ ಸಹಕಾರವನ್ನು ಬಲಪಡಿಸುವುದು, ಅಂತಾರಾಜ್ಯ ಅಪರಾಧಗಳನ್ನು ನಿಯಂತ್ರಿಸುವುದು ಮತ್ತು ಕೋಮು ಉದ್ವಿಗ್ನತೆ ತಡೆಯುವ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು.
ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳು:
1. ಕೋಮು ಪ್ರಕರಣಗಳಲ್ಲಿ ಶಂಕಿತರ ಪತ್ತೆ: ಇತ್ತೀಚಿನ ಕೋಮು ಉದ್ವಿಗ್ನತೆಯ ಹೊತ್ತಿನಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಎರಡೂ ಜಿಲ್ಲೆಗಳ ಪೊಲೀಸರು ಸಹಕಾರದಿಂದ ಕಾರ್ಯನಿರ್ವಹಿಸುವ ನಿರ್ಧಾರವಾಯಿತು.
2. ಉದ್ವಿಗ್ನತೆ ತಗ್ಗಿಸಲು ಕ್ರಮ: ಕೋಮು ಸಂಬಂಧಿತ ಉದ್ವಿಗ್ನ ಪರಿಸ್ಥಿತಿಗಳನ್ನು ಶಮನಗೊಳಿಸಲು ಬಲವಾದ ಬುದ್ಧಿವಂತ ಕಾರ್ಯತಂತ್ರಗಳನ್ನು ರೂಪಿಸಲು ನಿರ್ಧಾರ.
3. ಅಂತಾರಾಜ್ಯ ಅಪರಾಧ ನಿಯಂತ್ರಣ: ಕಾಸರಗೋಡು ಮತ್ತು ದ.ಕ. ಗಡಿಯಲ್ಲಿ ನಡೆದರೂ ಸಾಗುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳು.
4. ಅಕ್ರಮ ದನ ಹಾಗೂ ಮರಳು ಸಾಗಣೆ ನಿಯಂತ್ರಣ: ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಸಾಗಣೆ ಮೇಲೆ ಜಂಟಿ ನಿಗಾ ತಂಡಗಳ ದಾಳಿ ನಡೆಸುವ ತೀರ್ಮಾನ.
5. ಕೋಮುಗಲಭೆ ಮಾಡುವವರ ಮಾಹಿತಿ ವಿನಿಮಯ: ಗಡಿಯ ಎರಡೂ ಭಾಗಗಳಲ್ಲಿ ಕೋಮುಗಲಭೆಗೆ ಪ್ರಚೋದನೆ ಹಾಗೂ ಪ್ರಯತ್ನ ಮಾಡುವವರ ಬಗ್ಗೆ ದೃಡ ಮಾಹಿತಿಯ ವಿನಿಮಯ ಮತ್ತು ಅವುಗಳ ಆಧಾರದ ಮೇಲೆ ತ್ವರಿತ ಕ್ರಮ.
6. ವಿದ್ಯಾರ್ಥಿಗಳ ಸುರಕ್ಷತೆ: ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳ ಭದ್ರತೆ, ಅವಶ್ಯಕತೆಗಳು ಹಾಗೂ ಸಮಸ್ಯೆಗಳ ಬಗ್ಗೆ ಸಮಾಲೋಚನೆ.
ಸಭೆಯ ಅಂತ್ಯದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅವರು, “ಶಾಂತಿ, ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂಬ ಮಾಹಿತಿ ನೀಡಿದರು.
Post a Comment