ಅಡಿಕೆ ಹಾಗೂ ಕರಿಮೆಣಸು ವ್ಯಾಪಾರದ ಹೆಸರಿನಲ್ಲಿ ಲಕ್ಷಾಂತರ ರೂ ವಂಚನೆ – ಬಂಟ್ವಾಳದ ನೌಫಲ್ ಮಹಮ್ಮದ್ ಮೇಲೆ ಪ್ರಕರಣ ದಾಖಲು

ಬಂಟ್ವಾಳ, ಜೂನ್ 11:
ನಾವೂರ ಗ್ರಾಮದ ಕೃಷಿಕ ಪ್ರವೀಣ್ ಡಿ ಸೋಜಾ (45) ಎಂಬವರು ತಮ್ಮ ಬೆಳೆದ ಅಡಿಕೆಯನ್ನು ನೌಫಲ್ ಮಹಮ್ಮದ್ ಎಂಬವರಿಗೆ ಮಾರಾಟ ಮಾಡಿ ಹಣ ಪಡೆದುಕೊಳ್ಳಬೇಕಾಗಿದ್ದು, ಇದೀಗ ಲಕ್ಷಾಂತರ ರೂಪಾಯಿಗಳನ್ನು ವಂಚನೆಗೆ ಒಳಗಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರ ಪ್ರಕಾರ, ನೌಫಲ್ ಮಹಮ್ಮದ್ ಬಂಟ್ವಾಳ ಬಿ ಕಸ್ಬಾ ಗ್ರಾಮದ ಬಡ್ಡಕಟ್ಟೆ ವ್ಯಾಪ್ತಿಯ "ಎ. ಬಿ. ಸುಪಾರಿ ಅಂಗಡಿ"ಯ ಮೂಲಕ ಅಡಿಕೆ ಖರೀದಿಸುತ್ತಿದ್ದು, ಕೆಲ ಸಮಯದಿಂದಲೂ ಪೂರ್ಣ ಹಣ ನೀಡದೆ ಕಾಲಹರಣ ಮಾಡುತ್ತಿದ್ದನು. ಜು. 8, 2025 ರಂದು ಸುಮಾರು 6.5 ಕ್ವಿಂಟಾಲ್ ಅಡಿಕೆಯನ್ನು ಪಿರ್ಯಾದಿದಾರರು ನೌಫಲ್‌ನ ಅಂಗಡಿಗೆ ತಂದು ಮಾರಾಟ ಮಾಡಿದ್ದು, ರೂ. 3,50,000/- ಮೊತ್ತವನ್ನು ನೀಡದೇ ಇದ್ದನು. ಇದೇ ನೌಫಲ್ ಜೂನ್ 9 ರಂದು ನಷ್ಟದಲ್ಲಿದ್ದೇನೆ, ಸ್ವಲ್ಪಸ್ವಲ್ಪವಾಗಿ ಹಣ ಕೊಡುತ್ತೇನೆ ಎಂಬ ಮೆಸೇಜ್ ಕಳುಹಿಸಿದ್ದಾನೆ.

ಪರಿಣಾಮವಾಗಿ, ಜೂನ್ 10 ರಂದು ಅವರು ನೌಫಲ್‌ನ ಅಂಗಡಿಗೆ ಭೇಟಿ ನೀಡಿದಾಗ ಅಂಗಡಿಯ ಬಾಗಿಲಿಗೆ ಬೀಗ ಹಾಕಿದ್ದು, ಮನೆಗೂ ಬೀಗ ಹಾಕಲಾಗಿತ್ತು. ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ನೌಫಲ್ ಮರೆಮಾಡಿಕೊಂಡಿರುವುದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಪ್ರವೀಣ್ ಜೊತೆಗೆ ಇನ್ನೂ 24 ಮಂದಿ ಅಡಿಕೆ ಹಾಗೂ ಕರಿಮೆಣಸು ವ್ಯವಹಾರ ಮಾಡಿಕೊಂಡು ಹಣ ಪಡೆಯಲು ಬಾಕಿಯಾಗಿರುವವರು ಇದ್ದು, ಒಟ್ಟು ರೂ. 94,77,810/- ವಂಚನೆ ನಡೆದಿದೆ ಎನ್ನಲಾಗಿದೆ. ಇದನ್ನು ಆಧರಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಅಕ್ರ: 64/2025, ಕಲಂ: 316(2), 318(4) ಬಿಎನ್ಎಸ್ -2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ.

Post a Comment

Previous Post Next Post