ನಿವೃತ್ತ ಸೈನಿಕನಿಗೆ ಡಿಢೀರ್ ಹೃದಯಾಘಾತ – ಪ್ರಭಾಕರನ್ ಇಹಲೋಕ ತ್ಯಜಿಸಿದ ಘಟನೆ, ಕುಟುಂಬದಲ್ಲಿ ಶೋಕದ ಛಾಯೆ.!

ಕಡಬ, ಜೂನ್ 18:
ವರ್ಷದ ಹಿಂದೆ ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಊರಿನಲ್ಲಿ ನೆಲೆಸಿದ್ದ ಸೈನಿಕರೊಬ್ಬರು ಡಿಢೀರ್ ಹೃದಯಾಘಾತದಿಂದ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಜೂನ್ 18ರಂದು ಸಂಜೆ ನಡೆದಿದೆ.

ನಿವೃತ್ತ ಸೈನಿಕ ಪ್ರಭಾಕರನ್ ಮೂಲತಃ ಕೊಂಬಾರು ಗ್ರಾಮದವರು. ಇತ್ತೀಚೆಗಷ್ಟೇ ಕಡಬ ತಾಲೂಕಿನ ಕಳಾರ ಸಮೀಪದ ಅಲಾರ್ಮೆಯಲ್ಲಿ ಮನೆ ಕಟ್ಟಿಸಿಕೊಂಡು ಕುಟುಂಬ ಸಮೇತರಾಗಿ ನೆಲೆಸಿದ್ದರು. ಪ್ರಭಾಕರನ್ ಅವರು ರಂಗಸ್ವಾಮಿ ಮತ್ತು ಸೆಲ್ಲಾಯಿ ದಂಪತಿಗಳ ನಾಲ್ಕು ಮಕ್ಕಳಲ್ಲಿ ಧುಮ್ಮನೆ ಎಂಬಂತೆ ಕೊನೆಯ ಮಗನಾಗಿದ್ದರು.

ಭಾರತೀಯ ಸೇನೆಗೆ ಸುಮಾರು 20 ವರ್ಷ ಸೇವೆ ಸಲ್ಲಿಸಿದ್ದ ಇವರು, ವರ್ಷದ ಹಿಂದೆ ನಿವೃತ್ತಿಯಾದ ಬಳಿಕ ತವರೂರಿಗೆ ಮರಳಿದ್ದರು. ಇದೀಗ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು, ಎರಡು ವಾರಗಳ ಹಿಂದೆಯಷ್ಟೇ ತಮ್ಮ ಹೊಸ ಮನೆಯ ಗೃಹ ಪ್ರವೇಶವನ್ನು ಅದ್ದೂರಿಯಾಗಿ ನೆರವೇರಿಸಿದ್ದರು.

ಮಂಗಳವಾರ ಸಂಜೆ ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪುತ್ತೂರಿಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಅವರು ಕೊನೆಯುಸಿರೆಳೆದರು.

ಇವರ ಅಕಾಲಿಕ ನಿಧನದ ಸುದ್ದಿ ಊರಿನಲ್ಲಿ ಸಂತಾಪದ ಛಾಯೆ ಮೂಡಿಸಿದೆ. ಹಿತೈಷಿಗಳು, ಸ್ನೇಹಿತರು ಕುಟುಂಬವನ್ನು ಭೇಟಿಯಾಗಿ ಸಮಾಧಾನ ಹೇಳುತ್ತಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಪುಟಾಣಿ ಮಕ್ಕಳನ್ನು ಅಗಲಿದ್ದಾರೆ.

Post a Comment

Previous Post Next Post