ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ರಬ್ಬರ್ ತೋಟವೊಂದರಿಂದ ಸುಮಾರು ₹1.25 ಲಕ್ಷ ಮೌಲ್ಯದ 13 ಕ್ವಿಂಟಾಲ್ ರಬ್ಬರ್ ಸ್ರ್ಯಾಪ್ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ಕೊಟ್ವಾಯಂ ಜಿಲ್ಲೆಯ ಪೂವರನಿ ಮೂಲದ ವಿನೋ ಪಿ ತೋಮಸ್ (47), ಪ್ರಸ್ತುತ ರಘುರಾಮ್ ಶೆಟ್ಟಿಯವರ ಪೆರಿಂಜೆ, ಹೊಸಂಗಡಿ ನಿವಾಸಿಯಾಗಿ, ಕುತ್ಲೂರು ಗ್ರಾಮದ ಶ್ರೀಮತಿ ಸುನಿತಾ ಅವರ ರಬ್ಬರ್ ತೋಟವನ್ನು ಲೀಸ್‌ಗೆ ಪಡೆದು, ರಬ್ಬರ್ ಟ್ಯಾಪಿಂಗ್ ಕಾರ್ಯ ನಡೆಸುತ್ತಿದ್ದರು.
ಈ ತೋಟದಲ್ಲಿ ಕೆಲಸ ಮಾಡುತ್ತಿದ್ದ ಜೋಬಿನ್ ಮಾಥ್ಯೂ ಎಂಬ ಕಾರ್ಮಿಕನು, ಮೇ 3ರಿಂದ ಕೆಲಸಕ್ಕೆ ಸೇರಿದ್ದನು. ಆದರೆ ಮೇ 17ರ ಮಧ್ಯಾಹ್ನ 1:00 ಗಂಟೆಯಿಂದ ಮೇ 19ರ ರಾತ್ರಿ 8:00 ಗಂಟೆಯವರೆಗೆ ಅವಧಿಯಲ್ಲಿ, ತೋಟದಿಂದ ಸಂಗ್ರಹಿಸಿದ್ದ 13 ಕ್ವಿಂಟಾಲ್ ತೂಕದ ರಬ್ಬರ್ ಸ್ರ್ಯಾಪ್ ಅನ್ನು ಕಳವು ಮಾಡಿ ನಾಪತ್ತೆಯಾಗಿದ್ದಾನೆ.
ಆಪಾದಿತನು ಕೇರಳಕ್ಕೆ ಪರಾರಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ, ಪಿರ್ಯಾದಿದಾರರು ಸ್ವತಃ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದರೂ, ಜೋಬಿನ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ತಡವಾಗಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 2023ರ ಸೆಕ್ಷನ್ 306(BNS) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ. ಸ್ಥಳೀಯರ ಪ್ರಕಾರ, ಈ ರೀತಿಯ ಕಳ್ಳತನಗಳು ರಬ್ಬರ್ ತೋಟದ ಮಾಲಕರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿವೆ.
Post a Comment