ಮಂಗಳೂರು: 2020ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ವಿಜಯ ಸನ್ನಿಧಿ ಹೆದ್ದಾರಿ ಬಳಿ ಹಾಡುಹಗಲಲ್ಲಿ ನಡೆದ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮುಸ್ತಫಾ @ ಮುಸ್ತಾ ಎಂಬಾತನು ಮೂರು ವರ್ಷಗಳ ನಂತರ ಮಂಗಳೂರು ನಗರ ಪೊಲೀಸ್ ವಿಶೇಷ ತಂಡದ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದಾನೆ.
ಕೊಲೆ ಪ್ರಕರಣ ಹಿನ್ನೆಲೆ:
2020ರ ಜೂನ್ 5ರಂದು ಮುಲ್ಕಿ ವಿಜಯ ಸನ್ನಿಧಿ ಹೆದ್ದಾರಿ ಬಳಿ ಅಬ್ದುಲ್ ಲತೀಫ್ ಎಂಬವರನ್ನು 10 ಮಂದಿ ಆರೋಪಿಗಳು ಸೇರಿ ಮಾರಣಹೋಮ ನಡೆಸಿದ್ದು, ದಾವೂದ್ ಹಕೀಂ, ಮೊಹಮ್ಮದ್ ಮುಸ್ತಫಾ ಮತ್ತು ಇತರರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಪ್ರಕರಣ ಈವರೆಗೆ ವಿಚಾರಣಾ ಹಂತದಲ್ಲಿದೆ.
ಜಾಮೀನು ರದ್ದು - ಪರಾರಿ:
ಆರೋಪಿ ಮೊಹಮ್ಮದ್ ಮುಸ್ತಫಾ 2020ರ ಅಕ್ಟೋಬರ್ 19ರಂದು ಮಾನ್ಯ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದಿದ್ದನು. ಆದರೆ, 2022ರ ಏಪ್ರಿಲ್ 22ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯ ಜಾಮೀನು ರದ್ದು ಮಾಡಿದ ನಂತರ, ಆತನು ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿ ಆಗಿದ್ದನು.
ಅಕ್ರಮವಾಗಿ ಓಮನ್ - ನೇಪಾಳ ಮೂಲಕ ಭಾರತಕ್ಕೆ ಪ್ರವೇಶ:
2024ರ ಎಪ್ರಿಲ್‌ನಲ್ಲಿ ಓಮನ್ ರಾಷ್ಟ್ರದಿಂದ ನೇಪಾಳದ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಮುಸ್ತಫಾ, ಅದಕ್ಕೂ ಮುನ್ನ ಹಲವು ವರ್ಷಗಳಿಂದ ನ್ಯಾಯಾಲಯದ ವಾರಂಟಿನಿಂದ ತಪ್ಪಿಸಿಕೊಂಡು ನುಣುಚಿಕೊಳ್ಳುತ್ತಿದ್ದ.
ಬಂಧನ ಮತ್ತು ಮುಂದಿನ ಕ್ರಮ:
ಮುಸ್ತಫಾ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಜೂನ್ 30, 2025ರಂದು ಮುಲ್ಕಿ ತಾಲೂಕು ಪಕ್ಷಿಕೆರೆ ಬಳಿ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ವಿಚಾರಣೆಯಲ್ಲಿ ನಕಲಿ ಪಾಸ್ಪೋರ್ಟ್ ಬಳಸಿ ವಿದೇಶ ಪ್ರವೇಶಿಸಿ, ಬಳಿಕ ನೇಪಾಳ ಮಾರ್ಗವಾಗಿ ಭಾರತಕ್ಕೆ ಬಂದಿರುವುದು ದೃಢಪಟ್ಟಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇತರ ಪ್ರಕರಣಗಳು:
ಮುಸ್ತಫಾ ವಿರುದ್ಧ ಮುಲ್ಕಿ ಠಾಣೆಯಲ್ಲಿ ನಾಲ್ಕು ಹಾಗೂ ಇತರ ಜಿಲ್ಲೆಗಳಾದ ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿಯೂ ಎರಡು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ವಾರಂಟು ಬಾಕಿ ಇದೆ. ನಕಲಿ ಪಾಸ್ಪೋರ್ಟ್ ಸಂಬಂಧಿತವಾಗಿ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರು ಈ ಬಂಧನವನ್ನು ಖಚಿತಪಡಿಸಿದ್ದು, ಹತ್ತಿರದ ದಿನಗಳಲ್ಲಿ ಮತ್ತಷ್ಟು ವಿಚಾರಣೆ ಹಾಗೂ ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
Post a Comment