ಪತ್ರಿಕೆಗಳು ನಮ್ಮ ಬದುಕಿನ ಒಡನಾಡಿಗಳು ಹಾಗೂ ಜೀವನಾಡಿಗಳು. ಪ್ರಪಂಚವನ್ನೇ ನಮ್ಮ ಕಣ್ಣ ಮುಂದೆ ತಂದಿಡುವ ಜ್ಞಾನಲೋಕ. ಅವುಗಳಲ್ಲಿ ಪ್ರಕಟವಾಗುವ ಸುದ್ದಿಯ ಮೇಲೆ ಸುದ್ದಿಯ ಮನೆಗಳನ್ನು ಕಟ್ಟುವೆವು ನಾವು. ಅದಿಲ್ಲದೆ ಹೋದರೆ ನಾವು ಖಾಲಿ ಖಾಲಿ. ಸತ್ಯ ಸುದ್ದಿಗಳು ಮಾತ್ರ ನಾಳೆಯೂ ಉಳಿಯುತ್ತವೆ.
ಪತ್ರಿಕೆಗಳಿಗಿಂತಲೂ ವೇಗದಿಂದ ಸುದ್ದಿ ಕೊಡುವ ಮಾಧ್ಯಮಗಳಿದ್ದರೂ ಮಾರನೆಯ ದಿನ ಪತ್ರಿಕೆಗಳನ್ನು ಬಿಡಿಸಿ ಓದಿದಾಗಲೇ ಮನ ತುಂಬಿ ಬರುವುದು. ಅದಕ್ಕೆ ಕಾರಣವಿಷ್ಟೇ. ಅದು ಪತ್ರಕರ್ತರ ಕೈಚಳಕ. ಸತ್ಯಕ್ಕೆ ಅಪಚಾರವಾಗದಂತೆ ಸುಂದರ ಬರಹಗಳಿಂದ ಪೋಣಿಸಿದ ಸುದ್ದಿ ಓದುಗನ ಚಿತ್ತವನ್ನು ಸೆಳೆಯುತ್ತದೆ. ಅದು ಲೇಖನಿಯ ಮಹಿಮೆ. ಅವರ ಲೇಖನಿಯ ಮಸಿ ಎಂದೂ ಆರದಿರಲಿ.
ಹೌದು..... ಪತ್ರಿಕಾ ಪ್ರತಿನಿಧಿಯೂ ಒಬ್ಬ ಸಾಹಿತಿಯೇ ಸರಿ. ಆತ ಈ ಸಮಾಜದ ಗುರುವೂ ಹೌದು. ಆತನಲ್ಲಿ ಸುಂದರ ಶಬ್ದ ಸಂಪತ್ತುಗಳ ಭಂಡಾರ ತುಂಬಿರಬೇಕು. ಮೊಗೆದಷ್ಟು ಚಿಮ್ಮಿ ಬರಬೇಕು.
ಹೌದು ಅವರು ನಮ್ಮ ಮಿತ್ರರು. ಲೋಕದ ಸುದ್ದಿಗಳನ್ನು ನಮಗೆ ಅರಿವಿಲ್ಲದಂತೆ ನಮ್ಮ ಕಣ್ಣ ಮುಂದೆ ತಂದಿಡುವ ಆಪ್ತರು. ಅದನ್ನು ಓದಿದ ನಂತರವೇ ನಮ್ಮ ಜ್ಞಾನ ಲೋಕವೂ ವಿಸ್ತರಿಸಲ್ಪಡುತ್ತದೆ. ಸುದ್ದಿ ಮಾಧ್ಯಮಗಳಲ್ಲಿ ಪತ್ರಿಕೆ ಇನ್ನೂ ಕೂಡ ಉಸಿರಾಡುತ್ತಿದೆ...... ಅದು ಪತ್ರಕರ್ತರ ತಾಕತ್ತು. ಸತ್ಯವನ್ನೇ ಸಾರುತ್ತಿದೆ ಎಂಬ ನಂಬಿಕೆ ಇನ್ನೂ ಉಳಿದುಕೊಂಡಿದೆ. ಪತ್ರಿಕೆಗಳಿಗೆ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಶುಭ ಹಾರೈಸೋಣ.
*ಟಿ ನಾರಾಯಣ ಭಟ್ ರಾಮಕುಂಜ.ಲೇಖಕರು*.
Post a Comment