ಸುಬ್ರಹ್ಮಣ್ಯ: ಸರ್ಕಾರಿ ಆಂಬುಲೆನ್ಸ್ ಚಾಲಕ ಹೊನ್ನಪ್ಪ ನಾಪತ್ತೆ – ಪತ್ನಿಯಿಂದ ಪೊಲೀಸರಿಗೆ ದೂರು, ತೀವ್ರ ಆತಂಕ.

ಸುಬ್ರಹ್ಮಣ್ಯ, ಜುಲೈ 22:ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ. ಹೊನ್ನಪ್ಪ (52 ವರ್ಷ) ಎಂಬವರು ನಾಪತ್ತೆಯಾಗಿರುವ ಘಟನೆ ಚಿಂತೆಗೆ ಕಾರಣವಾಗಿದೆ. ಈ ಕುರಿತು ಅವರ ಪತ್ನಿ ಶ್ರೀಮತಿ ಪ್ರೇಮ (50) ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಪ್ರಕರಣ ಸಂಖ್ಯೆ 38/2025 ರಂತೆ ದೂರು ನೀಡಿದ್ದಾರೆ.

ದಿನಾಂಕ 22.07.2025 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ, ಹೊನ್ನಪ್ಪ ಅವರು ಕೆಲಸಕ್ಕೆ ಹೋಗುವಂತೆ ಮನೆಯಿಂದ ಹೊರಟಿದ್ದರು. ಆದರೂ ಕೆಲವೇ ಸಮಯದ ಬಳಿಕ ಪತ್ನಿ ಪ್ರೇಮ ಅವರು ಗಂಡ ಮೊಬೈಲ್‌ ಮನೆಯಲ್ಲಿ ಬಿಟ್ಟುಹೋಗಿರುವುದನ್ನು ಗಮನಿಸಿದ್ದು, ಸುಬ್ರಹ್ಮಣ್ಯ ಆಸ್ಪತ್ರೆಯ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅಲ್ಲಿಂದ ದೊರೆತ ಮಾಹಿತಿಯ ಪ್ರಕಾರ, ಹೊನ್ನಪ್ಪ ಅವರು ಆ ದಿನದಂದು ರಜೆ ಹಾಕಿದ್ದರು ಎಂದು ತಿಳಿದುಬಂದಿದೆ.

ಆದರೂ ಮದ್ಯಾಹ್ನದವರೆಗೂ ಮನೆಗೆ ಹಿಂದಿರುಗದ ಕಾರಣ ಪತ್ನಿ ಪುನಃ ಆಸ್ಪತ್ರೆಗೆ ಕರೆ ಮಾಡಿದಾಗ, ಅವರು ಚಲಾಯಿಸುವ ಸ್ಕೂಟರ್‌ ಆಫೀಸಿನಲ್ಲೇ ನಿಲ್ಲಿಸಿ ಹೋಗಿರುವುದು ತಿಳಿದುಬಂದಿತು. ಈ ವಿಚಾರದಿಂದ ಆತಂಕಗೊಂಡ ಪತ್ನಿ ಮತ್ತು ಕುಟುಂಬಸ್ಥರು ಸ್ಥಳೀಯರು, ದೇವಸ್ಥಾನದ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಎಲ್ಲೆಡೆ ಹುಡುಕಾಟ ನಡೆಸಿದರು.




ಸುಬ್ರಹ್ಮಣ್ಯ ಅಗ್ರಹಾರದ ಸೋಮನಾಥೇಶ್ವರ ದೇವಸ್ಥಾನದ ಸಿಸಿಟಿವಿ ಪರಿಶೀಲನೆ ವೇಳೆ, ಅವರು ಕುಮಾರಧಾರ ನದಿ ದಡದ ಕಡೆಗೆ ನಡೆದುಹೋಗುತ್ತಿರುವ ದೃಶ್ಯಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ನದಿ ದಡ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಶೋಧನೆ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.




ಘಟನೆ ತಿಳಿಯುತ್ತಿದ್ದಂತೆಯೇ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯೆ ಸೌಮ್ಯ, ಸಮಾಜ ಸೇವಕ ಡಾ. ರವಿಕಕ್ಕೆ ಪದವು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಸದಸ್ಯರು ಮತ್ತು ನೂರಾರು ಮಂದಿ ಗ್ರಾಮಸ್ಥರು ಪೊಲೀಸ್ ಠಾಣೆ ಮುಂದೆ ಸೇರಿ, ನಾಪತ್ತೆಯ ವಿಚಾರದಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಹೊನ್ನಪ್ಪ ಅವರ ಚಹರೆ ವಿವರ ಈ ರೀತಿ ಇದೆ:
ಎಣ್ಣೆ ಕಪ್ಪು ಮೈಬಣ್ಣ
ಕೋಲು ಮುಖ
ಸಾಧಾರಣ ಶರೀರ
ಎತ್ತರ: ಸುಮಾರು 5 ಅಡಿ 9 ಇಂಚು
ಕಪ್ಪು ಪ್ಯಾಂಟ್ ಮತ್ತು ಕಂದು–ಬಿಳಿ ಮಿಶ್ರಿತ ಟೀಶರ್ಟ್ ಧರಿಸಿರುತ್ತಾರೆ
ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಅನಿರೀಕ್ಷಿತ ಘಟನೆಯ ಕುರಿತು ಸ್ಥಳೀಯರ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ.



Post a Comment

أحدث أقدم