ಸುಬ್ರಹ್ಮಣ್ಯ: ನಾಪತ್ತೆ ಪ್ರಕರಣದಲ್ಲಿ ಮುಂದುವರಿದ ಶೋಧ ಕಾರ್ಯ; SDRF ತಂಡದಿಂದ ನದಿಯಲ್ಲಿ ಶೋಧನೆ.

ಸುಬ್ರಹ್ಮಣ್ಯ, ಜುಲೈ 22:
ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ. ಹೊನ್ನಪ್ಪ (52 ವರ್ಷ) ಎಂಬವರು ನಾಪತ್ತೆಯಾಗಿರುವ ಘಟನೆ ಚಿಂತೆಗೆ ಕಾರಣವಾಗಿದೆ. ಈ ಕುರಿತು ಅವರ ಪತ್ನಿ ಶ್ರೀಮತಿ ಪ್ರೇಮ (50) ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಪ್ರಕರಣ ಸಂಖ್ಯೆ 38/2025 ರಂತೆ ದೂರು ನೀಡಿದ್ದಾರೆ.





ದಿನಾಂಕ 22.07.2025ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ, ಕೆಲಸಕ್ಕೆ ಹೊರಟಿದ್ದ ಹೊನ್ನಪ್ಪ ಅವರು ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿದ್ದು, ಪತ್ನಿ ಪ್ರೇಮ ಅವರು ಗಂಡನ ಮೊಬೈಲ್‌ ಮನೆಯಲ್ಲಿ ಬಿಟ್ಟಿರುವುದು ಗಮನಿಸಿ, ಆಸ್ಪತ್ರೆಗೆ ಸಂಪರ್ಕಿಸಿದ್ದು, ಅವರು ಆ ದಿನ ರಜೆ ಹಾಕಿದ್ದರೆಂದು ತಿಳಿದುಬಂದಿತ್ತು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಗ್ರಾಮಸ್ಥರ ಸಹಕಾರದಿಂದ ಎಲ್ಲೆಡೆ ಹುಡುಕಾಟ ನಡೆಸಿದರು.

ಆ ಬಳಿಕ ಸುಬ್ರಹ್ಮಣ್ಯ ಅಗ್ರಹಾರದ ಸೋಮನಾಥೇಶ್ವರ ದೇವಸ್ಥಾನದ ಸಿಸಿಟಿವಿ ಪರಿಶೀಲನೆ ವೇಳೆ, ಅವರು ಕುಮಾರಧಾರ ನದಿ ದಡದ ಕಡೆಗೆ ನಡೆದುಹೋಗಿರುವ ದೃಶ್ಯ ದೃಢಪಟ್ಟಿದೆ. ಇದರಿಂದಾಗಿ ನದಿತೀರದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗುತ್ತಿದೆ.


ಇದೀಗ ಈ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ತೀವ್ರಗೊಳ್ಳಿದ್ದು, SDRF (State Disaster Response Force) ತಂಡ ಸ್ಥಳಕ್ಕೆ ಆಗಮಿಸಿ ಕುಮಾರಧಾರ ನದಿಗೆ ಬಿದ್ದಿರುವ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದೆ. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಸಮಾಜ ಸೇವಕ ಡಾ. ರವಿಕಕ್ಕೆಪದವು, ಹಾಗೂ 30 ರಿಂದ 40 ಯುವಕರ ತಂಡ ಸಹ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.


ಮತ್ತೊಂದೆಡೆ, ಬೆಳಿಗ್ಗೆ 11:00 ಗಂಟೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ, ಅವರ ಮಾರ್ಗದರ್ಶನದಲ್ಲಿ ನದಿಯ ತಳಭಾಗದಲ್ಲಿ ಇನ್ನಷ್ಟು ಶೋಧನೆ ನಡೆಯಲಿದೆ.


Post a Comment

أحدث أقدم