ಪವಿತ್ರ ಶ್ರಾವಣ ಮಾಸದ ಶುಕ್ಲ ಪಂಚಮಿಯ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲಿ ಜುಲೈ 29ರಂದು ನಾಗದೇವರಿಗಾಗಿ ಅದ್ದೂರಿಯಾಗಿ ವಿಶೇಷ ಪೂಜೆ ಹಾಗೂ ಕ್ಷೀರಾಭಿಷೇಕ ನಡೆಯಲಿದೆ. ನಾಡಿನ ನಾನಾ ಭಾಗಗಳಿಂದ ಭಗವದ್ಭಕ್ತರು ಆಗಮಿಸಿ ಈ ಪುಣ್ಯಕೃತ್ಯದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿಅವರು ಮಾಧ್ಯಮದ ಮೂಲಕ ವಿನಂತಿಸಿದ್ದಾರೆ.
ವಿಶೇಷ ಪೂಜೆ ಹಾಗೂ ಭಕ್ತರಿಗಾಗಿ ಭೋಜನ ವ್ಯವಸ್ಥೆ:
ನಾಗರ ಪಂಚಮಿಯ ಈ ಪುಣ್ಯ ಸಂದರ್ಭದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಭಜನೆ ಕಾರ್ಯಕ್ರಮ ನಡೆಯಲಿದೆ. ಜೊತೆಗೆ, ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತರಿಗೆ ಶ್ರೀದೇವರ ಪ್ರಸಾದದ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ.
ನಾಗರ ಪಂಚಮಿಯ ಮಹತ್ವ:
ನಾಗರ ಪಂಚಮಿ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದು. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ದಿನ ದಂದು ಆಚರಿಸಲಾಗುವ ಈ ಹಬ್ಬದಲ್ಲಿ ನಾಗದೇವತೆಯ ಪೂಜೆ ವಿಶೇಷ ಮಹತ್ವ ಹೊಂದಿದೆ. ಹಾವುಗಳಿಗೆ ಹಾಲು, ಹೂವು ಅರ್ಪಿಸಿ ಕ್ಷೀರಾಭಿಷೇಕ ಮಾಡುವ ಪರಂಪರೆ ಇದೆ.
ಈ ಹಬ್ಬವು ಸಹೋದರ ಮತ್ತು ಸಹೋದರಿಯರ ಬಾಂಧವ್ಯ, ಪ್ರೀತಿ ಮತ್ತು ಕಳಕಳಿಯ ಸಂಕೇತವೂ ಹೌದು. ಸಹೋದರಿಯರು ತಮ್ಮ ಸಹೋದರರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ ಎಂಬ ನಂಬಿಕೆಯನ್ನು ಈ ಹಬ್ಬ ಪುಷ್ಟಿಪಡಿಸುತ್ತದೆ.
ಭಕ್ತರಿಗೆ ಆಹ್ವಾನ:
ದೇಶದ ಎಲ್ಲ ಭಾಗಗಳಿಂದ ಭಕ್ತರು ಈ ವಿಶೇಷ ದಿನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಶ್ರೀ ನಾಗದೇವರ ದರ್ಶನ ಪಡೆದು, ಅಭಿಷೇಕ ಹಾಗೂ ಪೂಜೆಯಲ್ಲಿ ಭಾಗಿಯಾಗುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿಯಿಂದ ಮನವಿ ಮಾಡಲಾಗಿದೆ.
إرسال تعليق